ಮೈಸೂರು: ‘ಸುಡುಗಾಡು ಸಿದ್ದ’ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ ಅಂತ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ವಸತಿ ಸಚಿವ ವಿ ಸೋಮಣ್ಣ (V Somanna) ಕಿಡಿ ಕಾರಿದ್ದಾರೆ. ಅವರ ಕಾಲದಲ್ಲಿ ಬರೀ ಘೋಷಣೆ ಆಗಿತ್ತು. ನಾವು ಮನೆ ಕಟ್ಟಿಕೊಡುತ್ತಿದ್ದೇವೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಬೇಡಿ. ನಾವು ಕೊಟ್ಟಿದ್ದು, ನೀವು ಕೊಟ್ಟಿದ್ದು ಅನ್ನುವುದಲ್ಲ. ಜನರಿಗೆ ಮನೆ ಸಿಗಬೇಕು. ಸಿದ್ದರಾಮಯ್ಯ ಸಹ ಮನೆಯಿಂದ ತಂದು ಕೊಟ್ಟಿಲ್ಲ. ನಾನು ಸಹ ಮನೆಯಿಂದ ತಂದು ಕೊಡಲ್ಲ. ಇನ್ನು ಮುಂದೆಯಾದರೂ ಸೋಮಣ್ಣನನ್ನು ಟಾರ್ಗೆಟ್ ಮಾಡುವುದನ್ನು ಬಿಡಿ ಅಂತ ಸಚಿವರು ಹೇಳಿದರು.
ಪದೇಪದೆ ಮನೆಗಳನ್ನು ನೀಡಿಲ್ಲವೆಂದು ಹೇಳಬೇಡಿ. ನೂರು ಬಾರಿ ಸುಳ್ಳು ಹೇಳಿದರೆ ಸತ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ವಿ ಸೋಮಣ್ಣ, ನಾನು, ನೀವು ಇಬ್ಬರೂ ಒಂದೇ ಗರಡಿಯಲ್ಲಿ ಇದ್ದವರು. ನಿಮಗೆ ಅದೃಷ್ಟ ಇದ್ದು ಮುಖ್ಯಮಂತ್ರಿ ಆಗಿದ್ದೀರಿ. ನನಗೂ ಎಲ್ಲಾ ಅರ್ಹತೆ ಇದೆ. ನಾಲಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಿ ಅಂತ ಕಿಡಿಕಾರಿದ್ದಾರೆ.
ಇದೇ ವೇಳೆ ಹಿಜಾಬ್, ಕೇಸರಿ ವಿವಾದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಯಾರ್ ಯಾರು ಏನ್ ಮಾಡುತ್ತಿದ್ದಾರೆ ಎನ್ನುವುದನ್ನು ಸರ್ಕಾರ ಗಂಭೀರವಾಗಿ ಗಮನಿಸುತ್ತಿದೆ. ಇಲ್ಲಿ ಯಾರು ದೊಡ್ಡವರಲ್ಲ, ಎಲ್ಲರಿಗಿಂತ ದೊಡ್ಡದು ದೇಶ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಸಂಘಟನೆಗಳನ್ನು ಬಗ್ಗು ಬಡಿಯುವ ಕೆಲಸವನ್ನ ಸರ್ಕಾರ ಮಾಡಲಿದೆ. ಘಜಿನಿ ಮಹಮ್ಮದ್ 17 ಬಾರಿ ದಂಡೆತ್ತಿ ಬಂದ. ಅನೇಕ ರಾಜರು ದಾಳಿ ಮಾಡಿದರು. ಆದರೂ ಭಾರತ ಭಾರತವಾಗಿಯೇ ಇದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡದಿರಿ ಅಂತ ಸಚಿವರು ಹೇಳಿದರು.
ಇದನ್ನೂ ಓದಿ
ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ; ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಜಯತೀರ್ಥ, ಸತ್ಯ ಮೆಚ್ಚಿದ ‘ಗಿಲ್ಕಿ’ ಟ್ರೇಲರ್; ಇದು ಅಪರೂಪದ ಪ್ರೇಮಕಥೆಯ ವಿಭಿನ್ನ ಪ್ರಯತ್ನ
Published On - 12:13 pm, Sat, 12 February 22