ವಾಲ್ಮೀಕಿ ಹಗರಣದಲ್ಲಿ ಬಂಧನವಾಗಿದ್ದ ಶಾಸಕ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ?

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಅವರು ಜಾಮೀನ ಮೇಲೆ ಜೈಲಿಯಿಂದ ಆಚೆ ಬಂದಿದ್ದಾರೆ. ಮತ್ತೊಂದೆಡೆ ಇಡಿ ಪ್ರಕರಣದ ತನಿಖೆಯನ್ನು ನಡೆಸಿದೆ. ಇದರ ಮಧ್ಯ ಮತ್ತೆ ನಾಗೇಂದ್ರಗೆ ಸಚಿವ ಸ್ಥಾನ ಭಾಗ್ಯ ದೊರೆಯುವ ಸಾಧ್ಯತೆಗಳಿವೆ. ಈ ಬಗ್ಗೆ ಸಿಎಂ ಸುಳಿವು ನೀಡಿದ್ದಾರೆ.

ವಾಲ್ಮೀಕಿ ಹಗರಣದಲ್ಲಿ ಬಂಧನವಾಗಿದ್ದ ಶಾಸಕ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ?
ಬಿ.ನಾಗೇಂದ್ರ
Edited By:

Updated on: Nov 12, 2024 | 4:18 PM

ಮೈಸೂರು/ಬೆಂಗಳೂರು, (ನವೆಂಬರ್ 12): ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲಿಗೆ ಹೋಗಿ ಬಂದಿದ್ದಾರೆ. ಹೌದು..ನಾಗೇಂದ್ರ ಅವರು ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಮತ್ತೆ ಸಚಿವ ಸ್ಥಾನ ಭಾಗ್ಯ ದೊರೆಯುವ ಸಾಧ್ಯತೆಗಳು ಇವೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಮಾತುಗಳನ್ನಾಡಿದ್ದಾರೆ. ಜಾರಿ ನಿರ್ದೇಶನಾಲಯ (ಇ.ಡಿ) ವಾಲ್ಮೀಕಿ ಹಗರಣದ ತನಿಖೆಯನ್ನು ನಡೆಸಿದ್ದರೆ, ಇತ್ತ  ಸಿಎಂ,  ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಸುಳಿವು ಕೊಟ್ಟಿದ್ದಾರೆ.

ಮೈಸೂರು ಜಿಲ್ಲೆ H.D.ಕೋಟೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದಲ್ಲಿ ಕೆಲ ಹಣ ದುರುಪಯೋಗ ಆಗಿದೆ. ಆ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೂ ನಿಗಮಕ್ಕೆ ಒಂದು ಪೈಸೆಯೂ ಕಡಿಮೆ ಮಾಡಲ್ಲ. ನನ್ನ ಬಳಿಯೇ ಈಗ ಆ ಖಾತೆ ಇದೆ, ಹಣ ಮೀಸಲಿಡುತ್ತೇನೆ. ಶಾಸಕ ಬಿ.ನಾಗೇಂದ್ರ ಮೇಲೂ ಸುಳ್ಳು ಕೇಸ್ ಹಾಕಿಸಿದ್ದಾರೆ. ನಾಗೇಂದ್ರಗೆ ಈಗ ಬೇಲ್ ಸಿಕ್ಕಿದೆ, ಹೊರಗಡೆ ಬಂದಿದ್ದಾರೆ. ಚುನಾವಣೆ ಆದ್ಮೇಲೆ ಒಂದು ತೀರ್ಮಾನ ಮಾಡಬೇಕಿದೆ ಎಂದು ಹೇಳುವ ಮೂಲಕ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಸುಳಿವು ನೀಡಿದರು.

ಹೆಚ್‌ಡಿ.ಕೋಟೆಯಲ್ಲಿಂದು ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಸಿಎಂ ಮುಂದೆ ಬೇಡಿಕೆ ಇಟ್ಟರು. ಆ ವೇಳೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಎಲ್ಲಿ ಖಾಲಿ ಇದೆ, ಕೊಡುತ್ತೇನೆ ಎಂದು ಸುಳ್ಳು ಹೇಳಲು ಆಗಲ್ಲ. ಈಗ ಹೇಳಿ ಆ ನಂತರ ಮಾತಿಗೆ ತಪ್ಪಲು ಆಗುತ್ತಾ? ನಾಗೇಂದ್ರ ಅವರಿಗೆ ಕೊಡಬೇಕು. ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಿತ್ತು. ಬಳಿಕ ನಾಗೇಂದ್ರ ಅವರು ಸಿಎಂ ಸೂಚನೆ ಮೇರೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಡಿ ಅಧಿಕಾರಿಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಹಾಗೂ  ನಾಗೇಂದ್ರ ಅವರ ಮನೆಗಳ ಮೇಲೆ ದಾಳಿ ಮಾಡಿ ಕೆಲ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿತ್ತು. ಅಲ್ಲದೇ ನಾಗೇಂದ್ರ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿತ್ತು.

ಇನ್ನು ಜಾರಿ ನಿರ್ದೇಶನಾಲಯ ಒಟ್ಟು 4970 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿತ್ತು. ಈ ಆರೋಪ ಪಟ್ಟಿಯಲ್ಲಿ ವಾಲ್ಮೀಕಿ ಹಗರಣದಲ್ಲಿ ಬಿ ನಾಗೇಂದ್ರ ಪ್ರಮುಖ ರುವಾರಿ ಎಂದು ಉಲ್ಲೇಖಿಸಿತ್ತು. ಅಲ್ಲದೆ, ನಾಗೇಂದ್ರ ಅಣತಿಯಂತೆ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದೂ ಹೇಳಿತ್ತು. ಆದರೆ, ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಸಲ್ಲಿಕೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ಬಿ ನಾಗೇಂದ್ರ ಅವರ ಹೆಸರೇ ಇಲ್ಲ.

Published On - 4:15 pm, Tue, 12 November 24