ಮನಸ್ಸು ಬದಲಿಸಿದ್ರಾ ಸಿದ್ದರಾಮಯ್ಯ; ವರುಣಾ ದತ್ತ ಸಿದ್ದರಾಮಯ್ಯ ಒಲವು
ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದಲ್ಲಿದ್ದು, ತವರು ಕ್ಷೇತ್ರ ವರುಣಾದಲ್ಲಿ 2 ದಿನಗಳ ಪ್ರವಾಸದಲ್ಲಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಇದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaih)ಮಾತ್ರ ತಾವು ಸ್ಪರ್ಧಿಸುವ ಕ್ಷೇತ್ರವನ್ನು ಇನ್ನೂ ಘೋಷಿಸಿಲ್ಲ. ಇನ್ನೂ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಪ್ತರಿಂದ ಬುಲಾವ್ ಬರುತ್ತಿದೆ. ಕೆಲವು ತಿಂಗಳ ಹಿಂದೆ ಕೋಲಾರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಮತ್ತು ಅಲ್ಲಿನ ಕೈ ಕಾರ್ಯಕರ್ತರು ಮತ್ತು ಶಾಸಕರು ಸಿದ್ದರಾಮಯ್ಯ ಕೊಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ದುಂಬಾಲು ಬಿದ್ದಿದ್ದರು. ಸ್ವತಃ ಮಾಜಿ ಸ್ಪೀಕರ್ ರಮೇಶ್ ಕುಮಾರ ಸಿದ್ದರಾಮಯ್ಯ ಆಪ್ತರಾಗಿದ್ದು, ಸಿದ್ದರಾಮಯ್ಯ ಸ್ಪರ್ಧೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಮಾತ್ರ ಸ್ಪರ್ಧಿಸುವ ವಿಚಾರವನ್ನು ಬಿಟ್ಟುಕೊಟ್ಟಿರಲಿಲ್ಲ.
ಇನ್ನೂ ಕಳೆದ ಬಾರಿ ಸ್ಪರ್ಧಿಸಿ ಗೆದ್ದಿದ್ದ ಬದಾಮಿ ಕ್ಷೇತ್ರದಿಂದ ಈ ಬಾರಿ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಇದೀಗ ಸಿದ್ದರಾಮಯ್ಯ ಚಿತ್ತ ವರುಣಾ ಕ್ಷೇತ್ರದತ್ತ ನೆಟ್ಟಿದ್ದು ಈ ಕ್ಷೇತ್ರವನ್ನೇ ಫೈನಲ್ ಮಾಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಲಕ್ಕಿ ವರುಣಾ
ತವರು ಕ್ಷೇತ್ರ ವರುಣ ಸಿದ್ದರಾಮಯ್ಯ ಪಾಲಿಕೆ ಲಕ್ಕಿ ಕ್ಷೇತ್ರವಾಗಿದೆ. 2008ರಲ್ಲಿ ವರುಣಾದಿಂದ ಗೆದ್ದು ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, 2013ರಲ್ಲಿ ವರುಣಾದಿಂದ ಗೆದ್ದು ಮುಖ್ಯಮಂತ್ರಿ ಆಗಿದ್ದರು. ಆದರೆ 2018ರಲ್ಲಿ ವರುಣಾವನ್ನು ಮಗ ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟಿದ್ದರು. ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರೂ, ಬದಾಮಿಯಿಂದ ಶ್ರೀರಾಮುಲು ಎದರು ಕಡಿಮೆ ಅಂತರದಲ್ಲಿ ಗೆದ್ದಿದ್ದರು.
ವರುಣಾದತ್ತ ಮುಖಮಾಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದಲ್ಲಿ 2 ದಿನಗಳ ಪ್ರವಾಸದಲ್ಲಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ. ಸದ್ಯ ವರುಣಾ ಕ್ಷೇತ್ರದಿಂದ ಶಾಸಕರಾಗಿರುವ ಯತೀಂದ್ರ ಸಿದ್ದರಾಮಯ್ಯ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಹೊಗಳಿಕೆ ಮಾತುಗಳನ್ನು ಆಡಿದ್ದರು. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಗ್ಗೆ ಸ್ಥಳೀಯ ಮುಖಂಡರಿಗೆ ಒಲವು ಇದೆ. ಮತ್ತು ಗೊತ್ತಿರುವ ಕ್ಷೇತ್ರವಾಗಿರುವುದರಿಂದ ಸುರಕ್ಷಿತ ಅನ್ನೋ ನಂಬಿಕೆ ಕೂಡ ಇದೆ. ಮಗ ಯತೀಂದ್ರ, ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧರಿದ್ದಾರೆ. ಇದರ ಜೊತೆಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಸೇರಿ ಹಲವು ನಾಯಕರು ಒತ್ತಡ ಹಾಕುತ್ತಿದ್ದಾರೆ. ಈ ಕಾರಣದಿಂದ ವರುಣಾದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಫಿಕ್ಸ್ ಆದ್ರಾ?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Sat, 10 December 22