ಮೈಸೂರು, ಸೆಪ್ಟೆಂಬರ್ 20: ಈ ಬಾರಿಯ ಮೈಸೂರು ದಸರಾವನ್ನು (Mysore Dasara-2024) ಸಾಹಿತಿ ಹಂಪ ನಾಗರಾಜಯ್ಯ (Hampa Nagarajaiah) ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಘೋಷಿಸಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ದಸರಾಕ್ಕೆ ಮೈಸೂರಿನಲ್ಲಿ ತಯಾರಿ ಆರಂಭವಾಗಿದೆ. ಈಗಾಗಲೇ ಗಜಪಡೆ ತಾಲೀಮು ಆರಂಭವಾಗಿದೆ. ಅಕ್ಟೋಬರ್ 3 ರಂದು ಮೈಸೂರು ದಸರಾಕ್ಕೆ ಚಾಲನೆ ಸಿಗಲಿದೆ.
2024ರ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು ಅದೇ ತಿಂಗಳ 12ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.
ಅಕ್ಟೋಬರ್ 3ರಂದು ಚಾಮುಂಡೇಶ್ವರಿ ದೇವಿಗೆ ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದ್ದು, ನಂತರ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಅಕ್ಟೋಬರ್ 12ರಂದು ನವಮಿಯ ದಿನ ದುರ್ಗಾಷ್ಟಮಿ, ಮಹಾನವಮಿ, ಆಯುಧ, ಆನೆ ಮತ್ತು ಕುದುರೆ ಪೂಜೆ ನೆರವೇರಲಿದೆ.
ದಸರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 13ರಂದು ವಿಜಯ ದಶಮಿ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ.
ಇದನ್ನೂ ಓದಿ: ಮೈಸೂರು ದಸರಾ ಪ್ರಾಯೋಜಕತ್ವದ ಪಟ್ಟಿ ಬಿಡುಗಡೆ
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕಾರಣ ಕಳೆದ ವರ್ಷ ಸರಳವಾಗಿ, ಸಾಂಪ್ರದಾಯಿಕ ದಸರಾ ಹಬ್ಬವನ್ನು ಆಚರಿಸಲಾಗಿತ್ತು. ಆದರೆ, ಈ ವರ್ಷ ಉತ್ತಮ ಮುಂಗಾರು ಮಳೆ ಆಗಿರುವುದರಿಂದ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Fri, 20 September 24