ಮಂಡ್ಯ: ಕೆಆರ್ಎಸ್ ಬಿರುಕು ಬಿಟ್ಟಿರುವ ಹೇಳಿಕೆ ಮತ್ತು ಅಕ್ರಮ ಗಣಿಗಾರಿಕೆ ಪರ-ವಿರೋಧ ಹೇಳಿಕೆಗಳು ಶುಕ್ರವಾರವೂ ಮುಂದುವರಿಯಿತು. ಆದರೆ ಸಾರ್ವಜನಿಕ ಚರ್ಚೆಯಲ್ಲಿ ಬಳಕೆಯಾಗುತ್ತಿರುವ ಭಾಷೆ ಮಾತ್ರ ದಿನದಿಂದ ದಿನಕ್ಕೆ ಕೆಳಗಿಳಿಯುತ್ತಿದೆ. ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್‌ಗೌಡ ನೀಡಿರುವ ಹೇಳಿಕೆಗಳು ಮತ್ತು ಬಳಸಿರುವ ಭಾಷೆಯ ಬಗ್ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್‌ಗೌಡ, ‘ಯಾರ್ ರೀ ಅವನು, ಯಾವ ರಾಕ್‌ಲೈನ್ ವೆಂಕಟೇಶ್? ಮಂಡ್ಯಕ್ಕೂ ರಾಕ್‌ಲೈನ್ ವೆಂಕಟೇಶ್ಗೂ ಏನ್ ಸಂಬಂಧ? ನೀನ್ ಯಾವ ಊರ್ ದಾಸಯ್ಯ’ ಎಂದು ವಾಗ್ದಾಳಿ ನಡೆಸಿದರು.
‘ನಿಂದು ಎಲ್ಲಿದೆ ಅಲ್ಲಿ ಇಟ್ಟುಕೋ, ಮಂಡ್ಯ ರಾಜಕೀಯಕ್ಕೆ ನೀನು ಬರಬೇಡ. ಮಂಡ್ಯ ರಾಜಕೀಯದ ಬಗ್ಗೆ ಮಾತನಾಡಲು ನೀನ್ಯಾರು? ಬಾಯಿಗೆ ಬಂದ ಹಾಗೆ ಮಾತನಾಡಿದರೆ ನಾವು ಸುಮ್ಮನಿರಲ್ಲ. ನಾವೇನು ಕೈಕಟ್ಟಿ ಕೂರೋರು ಅಲ್ಲ. ನಾವು ಕರ್ನಾಟಕದವರಲ್ಲವೇ ಎಲ್ಲರನ್ನೂ ಫ್ರೀಯಾಗಿ ಬಿಡ್ತೇವೆ. ಇಲ್ಲಿಗೆ ಬಂದವರು ನಮ್ಮವರೇ ಎಂದು ಪರೋಕ್ಷವಾಗಿ ರಾಕ್‌ಲೈನ್ ವೆಂಕಟೇಶ್ ಕರ್ನಾಟಕದವರಲ್ಲ ಎಂದು ಹರಿಹಾಯ್ದರು.
‘ಸಂಸದೆ ಸುಮಲತಾರಿಗೆ ಯಾರೋ ಕೀ ಕೊಡ್ತಾ ಇದ್ದಾರೆ. ನಮ್ಮಿಬ್ಬರಲ್ಲಿ ತಂದಿಟ್ಟು ತಮಾಷೆ ಮಾಡುವ ಮನೆಹಾಳರೇ ಇಲ್ಲಿ ಹೆಚ್ಚಾಗಿದ್ದಾರೆ. ಅವರು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿಯೇ ಇರ್ತಾರೆ. ಎಂಪಿ ಚುನಾವಣೆ ವೇಳೆ ಯಾರು ಹೆಂಗೆ ಕೀ ಕೊಟ್ಟಿದ್ರು, ಆಗ ಕೀ ಕೊಟ್ಟವರೇ ಇದರಲ್ಲಿ ಪಾತ್ರಧಾರಿಗಳಾಗಿದ್ದಾರೆ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ ವಿಚಾರ ಪ್ರಸ್ತಾಪಿಸಿದರು.
ಕುಮಾರಸ್ವಾಮಿ ಬಗ್ಗೆ ಹಿರಿಯ ನಟ ದೊಡ್ಡಣ್ಣ ಹೇಳಿಕೆ ನೀಡಿರುವ ವಿಚಾರ ಪ್ರಸ್ತಾಪಿಸಿದ ಸುರೇಶ್ ಗೌಡ, ದೊಡ್ಡಣ್ಣ ಸ್ವತಃ ಮಾತನಾಡಿದ್ದಾರೋ ಅಥವಾ ಅವರನ್ನು ಯಾರಾದಾರೂ ಮಾತಾಡಿಸಿದ್ದಾರೋ ಗೊತ್ತಿಲ್ಲ. ಹೀಗೊಂದು ಡೈಲಾಗ್ ಹೊಡಿ ಎಂದು ಹೊಡೆಸಿರಬಹುದು. ಡೈಲಾಗ್ ಹೊಡಿ ಅಂದ್ರು ಹೊಡೆದುಬಿಟ್ಟೆ ಅಂತ ಹೇಳಬಹುದು. ಅವರು ಮೇರು ಕಲಾವಿದರು, ಇಷ್ಟು ದಿನ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
ಇದು ಇನ್ನೂ ಎಲ್ಲೆಲ್ಲಿಗೆ ಹೋಗುತ್ತೆ ನೋಡೋಣ ಎಂದು ಹೇಳಿದ ಸುರೇಶ್‌ಗೌಡ, ದಯವಿಟ್ಟು ಮಾತಾಡಬೇಡಿ ಎಂದು ನಮ್ಮ ನಾಯಕರಿಗೆ ಮನವಿ ಮಾಡುತ್ತೇನೆ. ನಮ್ಮ ಮಾತುಗಳನ್ನೇ ಅವರು ಬಂಡವಾಳ ಮಾಡಿಕೊಳ್ಳುತ್ತಾರೆ ಎಂದು ನುಡಿದರು.
(Nagamangala MLA Suresh Gowda Alleges Rockline Venkatesh Doddanna and Cheluvarayaswamy on KRS issue)
ಇದನ್ನೂ ಓದಿ: Sumalatha Ambareesh: ಪತಿ ಅಂಬರೀಶ್ರನ್ನು ನೆನೆದು ಟಿವಿ9 ಸ್ಟುಡಿಯೋದಲ್ಲಿ ಸುಮಲತಾ ಅಂಬರೀಶ್ ಕಣ್ಣೀರು
ಇದನ್ನೂ ಓದಿ: ಪ್ರತಾಪ್ ಸಿಂಹ ಜೆಡಿಎಸ್ ಸೇರಿದ್ರಾ? ಅವರು ಮೈಸೂರಿಗೆ ಸಂಸದರೋ? ಮಂಡ್ಯಕ್ಕೋ? – ಸುಮಲತಾ
Published On - 9:53 pm, Fri, 9 July 21