Namma Metro: ಎಂಜಿ ರೋಡ್​​​-ಬೈಯಪ್ಪನಹಳ್ಳಿ ನಡುವೆ ಮೆಟ್ರೋ ರೈಲು ಸಂಚಾರ ಪುನರಾರಂಭ

| Updated By: ಆಯೇಷಾ ಬಾನು

Updated on: Jan 27, 2024 | 1:16 PM

ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸದ್ಯ BMRCL ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಸರಿಪಡಿಸಿದ್ದು ಸಂಚಾರ ಪುನರಾರಂಭವಾಗಿದೆ. ಪೀಣ್ಯ ಹಾಗೂ ನಾಗಸಂದ್ರದ ನಡುವೆ ಮೆಟ್ರೋ ರೈಲು ಸೇವೆ ಸ್ಥಗಿತಗೊಂಡಿದೆ. ಜನವರಿ 29ರ ಬೆಳಗ್ಗೆ 5 ಗಂಟೆಯಿಂದ ಎಂದಿನಂತೆ ಸಂಚಾರ ಶುರುವಾಗಲಿದೆ.

Namma Metro: ಎಂಜಿ ರೋಡ್​​​-ಬೈಯಪ್ಪನಹಳ್ಳಿ ನಡುವೆ ಮೆಟ್ರೋ ರೈಲು ಸಂಚಾರ ಪುನರಾರಂಭ
ನಮ್ಮ ಮೆಟ್ರೋ
Follow us on

ಬೆಂಗಳೂರು, ಜ.27: ನೇರಳೆ ಮಾರ್ಗದಲ್ಲಿ ಮೆಟ್ರೋ  (Namma Metro) ರೈಲು ಸಂಚಾರ ಪುನರಾರಂಭವಾಗಿದೆ. ತಾಂತ್ರಿಕ ದೋಷದಿಂದ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸದ್ಯ BMRCL ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಸರಿಪಡಿಸಿದ್ದು ಸಂಚಾರ ಪುನರಾರಂಭವಾಗಿದೆ. ಮೆಟ್ರೋ ರೈಲು ವ್ಯತ್ಯಯದಿಂದ ಪ್ರಯಾಣಿಕರು ಪರದಾಡಿದ್ದರು.

ಬಿಎಂಆರ್​ಸಿಎಲ್​ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಎಂಜಿ ರೋಡ್ ಮತ್ತು ಚಲ್ಲಘಟ್ಟ ನಡುವೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಪೀಣ್ಯ – ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ಸ್ಥಗಿತ

ಪೀಣ್ಯ ಹಾಗೂ ನಾಗಸಂದ್ರದ ನಡುವೆ ಮೆಟ್ರೋ ರೈಲು ಸೇವೆ ಸ್ಥಗಿತಗೊಂಡಿದೆ. ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗದಲ್ಲಿ ಕಾಮಾಗಾರಿ ನಡೆಯುತ್ತಿರುವ ಕಾರಣ ಶುಕ್ರವಾರ ಜನವರಿ 26 ರಿಂದ ಜನವರಿ 28ರ ತನಕ ಮೆಟ್ರೋ ರೈಲು ಸಂಚಾರ ತಾತ್ಕಲಿಕ ಸ್ಥಗಿತಗೊಂಡಿದೆ. ಹೀಗಾಗಿ ನಾಳೆ ಕೂಡ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಜನವರಿ 29ರ ಬೆಳಗ್ಗೆ 5 ಗಂಟೆಯಿಂದ ಎಂದಿನಂತೆ ಸಂಚಾರ ಶುರುವಾಗಲಿದೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನಿಡಿದೆ.

ಮೆಟ್ರೋದ ಎರಡನೇ ಹಂತದ ಕಾಮಗಾರಿ ಕೂಡ ಸದ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ನಗರದ ಎಲ್ಲ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಆರ್​ಸಿಎಲ್ ಚುರುಕಿನ ಕಾಮಗಾರಿ ನಡೆಸುತ್ತಿದೆ. ಇದರಡಿ ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಮಾದವಾರ ವರೆಗೆ ಮೆಟ್ರೋ ಸೇವೆ ದೊರೆಯಲಿದೆ.

ಇದನ್ನೂ ಓದಿ: ಗವಿಮಠದ ಜಾತ್ರೆಯ ರಥಬೀದಿಯಲ್ಲಿ ರಾಮಜಪ; ರಂಗೋಲಿಯಲ್ಲಿ ಅರಳಿದ ರಾಮ ಮಂದಿರ

ಮೆಟ್ರೋ ಸಂಚಾರ ಸ್ಥಗಿತಗೊಳ್ಳುವ ಕಾರಣ ಪೀಣ್ಯ ಸುತ್ತ ಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸದ್ಯ ನಮ್ಮ ಮೆಟ್ರೋ ರೈಲುಗಳಲ್ಲಿ ದಿನವೊಂದಕ್ಕೆ ಬರೊಬ್ಬರಿ 6.5 ಲಕ್ಷ ಜನ ಸಂಚರಿಸುತ್ತಿದ್ದಾರೆ. ಈ ಪೈಕಿ 80 ಸಾವಿರದಿಂದ 1 ಲಕ್ಷ ಜನ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದಾರೆ. ಇದು ಟಿಕೆಟ್ ಕೌಂಟರ್​​ನ ಒತ್ತಡ ಕಡಿಮೆ ಆಗಲು ಕಾರಣವಾಗಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:12 pm, Sat, 27 January 24