ನೀವು ಪತ್ರ ಬರೆದರೆ 3 ದಿನಗಳಲ್ಲಿ ಮೆಟ್ರೋ ಟಿಕೆಟ್​ ದರ ಇಳಿಕೆ: ಸಿಎಂಗೆ ಬಿಜೆಪಿ ಸಂಸದರ ಭರವಸೆ

ಬೆಂಗಳೂರಿನ ನಮ್ಮ ಮೆಟ್ರೋ ರೈಲು ಪ್ರಯಾಣದ ದರ ಏರಿಕೆಯಿಂದಾಗಿ ಜನರಲ್ಲಿ ಆಕ್ರೋಶ ಉಂಟಾಗಿದೆ. ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ದರ ಇಳಿಕೆಗೆ ಒತ್ತಾಯಿಸಿದೆ. ಸಿಎಂ ಸಿದ್ದರಾಮಯ್ಯ ದರ ನಿಗದಿ ಸಮಿತಿಗೆ ಮತ್ತೊಂದು ಪತ್ರ ಬರೆಯುವ ಭರವಸೆ ನೀಡಿದ್ದಾರೆ. ಪ್ರತಿ ಕ್ಷೇತ್ರಕ್ಕೆ 150 ಕೋಟಿ ರೂ. ಅನುದಾನ ನೀಡುವಂತೆ ಬಿಜೆಪಿ ನಿಯೋಗ ಇದೇ ವೇಳೆ ಮನವಿ ಮಾಡಿದೆ.

ನೀವು ಪತ್ರ ಬರೆದರೆ 3 ದಿನಗಳಲ್ಲಿ ಮೆಟ್ರೋ ಟಿಕೆಟ್​ ದರ ಇಳಿಕೆ: ಸಿಎಂಗೆ ಬಿಜೆಪಿ ಸಂಸದರ ಭರವಸೆ
ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಬಿಜೆಪಿ ನಿಯೋಗ
Updated By: ವಿವೇಕ ಬಿರಾದಾರ

Updated on: Feb 28, 2025 | 1:53 PM

ಬೆಂಗಳೂರು, ಫೆಬ್ರವರಿ 28: ನಮ್ಮ ಮೆಟ್ರೋ (Namma Metro) ಪ್ರಯಾಣದ ದರ ಏರಿಕೆಯಿಂದ ಬೆಂಗಳೂರಿನ (Bengaluru) ಜನರು ಕಂಗೆಟ್ಟಿದ್ದು, ಬಿಎಂಆರ್​ಸಿಎಲ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ರಾಜ್ಯ ಬಿಜೆಪಿ ನಿಯೋಗ ಶುಕ್ರವಾರ (ಫೆ.28) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಮೆಟ್ರೋ ಪ್ರಯಾಣದ ದರ ಇಳಿಕೆ ಕುರಿತಾಗಿ ಮಾತುಕತೆ ನಡೆಸಿದೆ. “ಮೆಟ್ರೋ ಪ್ರಯಾಣ ದರ ಸಂಬಂಧ ದರ ನಿಗದಿ ಸಮಿತಿಗೆ ನೀವು ಮತ್ತೊಂದು ಪತ್ರ ಬರೆಯಿರಿ. ನಾವು ಮೂರೂ ಜನ ಸಂಸದರು ಸೇರಿಕೊಂಡು ಮೂರು ದಿನಗಳಲ್ಲಿ ಇಳಿಕೆ ಮಾಡಿಸುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

“ಈ ಬಗ್ಗೆ ಬಿಎಂಆರ್​ಸಿಎಲ್​ ಎಂಡಿ ಜೊತೆ ಮಾತಾಡುತ್ತೇನೆ. ದರ ನಿಗದಿ ಸಮಿತಿಗೆ ಮತ್ತೊಂದು ಪತ್ರ ಬರೆಯುವ ಬಗ್ಗೆ ಹೇಳುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

150 ಕೋಟಿ ರೂ. ಅನುದಾನ ನೀಡುವಂತೆ ಮನವಿ

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ಬಿಜೆಪಿ ನಿಯೋಗ ಪ್ರತಿ ಕ್ಷೇತ್ರಕ್ಕೆ 150 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ ಅನುದಾನ ಹಂಚಿಕೆ ಬಗ್ಗೆ ಪರಿಶೀಲಿಸುತ್ತೇನೆ. ಈಗಾಗಲೇ ಪ್ರತಿ ಕ್ಷೇತ್ರಕ್ಕೂ ಗ್ಯಾರಂಟಿ ಯೋಜನೆಗಳಿಗೆ 250 ಕೋಟಿ ರೂ. ಒದಗಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅನುದಾನ ನೀಡುವಂತೆ ಮನವಿ: ಆರ್​ ಅಶೋಕ್​

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಬೆಂಗಳೂರು ನಗರದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. 2 ವರ್ಷದಿಂದ ನೋಡಿ ಬೇಸತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಎಲ್ಲಾ ಬಿಜೆಪಿ ಶಾಸಕರು ಅನುದಾನ ಇಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್ ಹೇಳಿದರು.

ಬಿಜೆಪಿ ಅವಧಿಯಲ್ಲಿ ಯಾರಿಗೂ ತಾರತಮ್ಯ ಮಾಡಿಲ್ಲ. ಈ ಸರ್ಕಾರ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಮೆಟ್ರೋ ರೈಲು ಪ್ರಯಾಣ ದರ ಏರಿಕೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಮೆಟ್ರೋ ವಿರುದ್ಧ ಜನರೇ ಧರಣಿ ನಡೆಸಲು ಮುಂದಾಗಿದ್ದಾರೆ. ವಿರೋಧ ಪಕ್ಷವಾಗಿ ಸರ್ಕಾರಕ್ಕೆ ತೊಂದರೆ ಕೊಡಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದರು.

ಇದನ್ನೂ ಓದಿ: ಪ್ರಯಾಣ ದರ ಏರಿಕೆ ಪರಿಣಾಮ: ನಮ್ಮ ಮೆಟ್ರೋದಿಂದ ದೂರವುಳಿದ 6 ಲಕ್ಷ ಪ್ರಯಾಣಿಕರು!

ವಿಪಕ್ಷ ನಾಯಕ ಆರ್​.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ರಾಮಮೂರ್ತಿ, ಭೈರತಿ ಬಸವರಾಜ, ಕೆ.ಗೋಪಾಲಯ್ಯ, ಎಂ.‌ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ಮುನಿರತ್ನ, ಉದಯ ಗರುಡಾಚಾರ್, ಎಸ್.ರಘು, ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಕೇಶವಪ್ರಸಾದ್​ ನೇತೃತ್ವದಲ್ಲಿ ಬಿಜೆಪಿ ನಿಯೋಗ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ