ಬೆಂಗಳೂರಿನಲ್ಲಿ ಆಪರೇಷನ್ ಇಡ್ಲಿ: ಹೋಟೆಲ್ಗಳ ಮೇಲೆ ಅಧಿಕಾರಿಗಳ ರೇಡ್, ಇಂಚಿಂಚೂ ಶೋಧ
ಬೆಂಗಳೂರಿನ ಹೋಟೆಲ್, ದರ್ಶಿನಿಗಳ ಇಡ್ಲಿಯಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಹಲವೆಡೆ ದಾಳಿ ನಡೆಸಿ ಇಡ್ಲಿ ತಯಾರಿ ಪ್ರಕ್ರಿಯೆಯ ಪರಿಶೀಲನೆ ನಡೆಸಿದೆ. ಈ ಮಧ್ಯೆ, ಹಸಿರು ಬಟಾಣಿಯಲ್ಲಿ ಕೃತಕ ಬಣ್ಣದ ಬಳಕೆಯೂ ಪತ್ತೆಯಾಗಿದೆ. ‘ಟಿವಿ9’ ಅಭಿಯಾನದಿಂದ ಈ ಸಮಸ್ಯೆ ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಬೆಂಗಳೂರು, ಫೆಬ್ರವರಿ 28: ರಸ್ತೆ ಬದಿಗಳಲ್ಲಿ ಸಿಗುವ ಫುಡ್ಗಳ ಮೇಲೆ ಕಣ್ಣಿಟ್ಟಿದ್ದ ಆರೋಗ್ಯ ಇಲಾಖೆ, ಒಂದಿಷ್ಟು ಕಡೆಗಳಿಂದ ಆಹಾರದ ಸ್ಯಾಂಪಲ್ಗಳನ್ನು ಸಂಗ್ರಹ ಮಾಡಿತ್ತು. ಅದರಲ್ಲಿ ಇಡ್ಲಿ ಸ್ಯಾಂಪಲ್ಗಳ ವರದಿಯೇ ಬೆಚ್ಚಿ ಬೀಳಿಸುವಂತಿವೆ. ಪ್ಲಾಸ್ಟಿಕ್ ಕವರ್ ಬಳಕೆಯಿಂದ ಇಡ್ಲಿಯಲ್ಲಿ ಹಾನಿಕಾರಕ ವಸ್ತು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಪ್ರಯೋಗದ ವರದಿ ಹೇಳಿತ್ತು. ಇದು ಕ್ಯಾನ್ಸರ್ಗೆ ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ವಿಷಯ ಗೊತ್ತಾಗಿದ್ದೇ ತಡ, ಗುರುವಾರದಿಂದಲೇ ‘ಟಿವಿ9’ ಅಭಿಯಾನ ಮೂಲಕ ಆರೋಗ್ಯ ಅಧಿಕಾರಿಗಳ ವೇಗದ ಕೆಲಸಕ್ಕೆ ಚುರುಕು ಮುಟ್ಟಿಸಿದೆ.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಬಂಧ ‘ಟಿವಿ9’ ನಿರಂತರವಾಗಿ ವರದಿ ಪ್ರಸಾರ ಮಾಡಿದ್ದೇ ತಡ, ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಕೂಡ ಆಪರೇಷನ್ಗೆ ಇಳಿದಿದ್ದಾರೆ. ನಗರದ ಹಲವು ಕಡೆಗಳಲ್ಲಿ ಹೋಟೆಲ್ಗಳಲ್ಲಿ ತಪಾಸಣೆಗಿಳಿದ ಅಧಿಕಾರಿಗಳು ಇಡ್ಲಿಗೆ ಕವರ್ ಬಳಕೆ ಮಾಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಿದರು.
‘ಟಿವಿ9’ ಅಭಿಯಾನಕ್ಕೆ ಸಾರ್ವಜನಿಕರು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಟಿವಿ9 ಜತೆ ಮಾತನಾಡಿದ ಅವರು, ಪ್ಲಾಸ್ಟಿಕ್ ನಿಷೇಧಿಸಿದರೆ ಎಲ್ಲರಿಗೂ ಒಳ್ಳೆಯದೇ ಆಗುತ್ತೆ ಎಂದಿದ್ದಾರೆ.
ಹೋಟೆಲ್ ಮಾಲೀಕರು ಮಾತನಾಡಿ, ನಾವು ಪ್ಲಾಸ್ಟಿಕ್ ಪೇಪರ್ ಬಳಸುತ್ತಿಲ್ಲ ಎಂದರು. ಇಷ್ಟೇ ಅಲ್ಲ ಈ ಬಗ್ಗೆ ಸರ್ಕಾರ ಕೂಡ ಎಚ್ಚೆತ್ತುಕೊಂಡು ಕೆಲಸ ಮಾಡಲಿ ಎಂದರು.
ಬೆಂಗಳೂರು ಮಾತ್ರವಲ್ಲ ಜಿಲ್ಲೆ ಜಿಲ್ಲೆಯಲ್ಲೂ ‘ಟಿವಿ9’ ರಿಯಾಲಿಟಿ ಚೆಕ್ ಮಾಡಿದೆ. ಪ್ರತಿಕ್ರಿಯಿಸಿದ ಪ್ರತಿಯೊಬ್ಬರು ಕೂಡ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದರೆ ಒಳ್ಳೆಯದು ಎಂದಿದ್ದಾರೆ.
ಹಸಿರು ಬಟಾಣಿಯಲ್ಲಿ ಬಳಕೆಯಾಗುತ್ತಿದೆ ಕೃತಕ ಬಣ್ಣ
ಇಡ್ಲಿ ಮಾತ್ರವಲ್ಲ ಹಸಿರು ಬಟಾಣಿಯಲ್ಲೂ ಕೃತಕ ಕಲರ್ ಬಳಕೆ ಮಾಡ್ತಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಒಟ್ಟು 36 ಮಾದರಿಗಳನ್ನ ಸಂಗ್ರಹಿಸಿದ್ದು, 28 ಸ್ಯಾಂಪಲ್ಗಳಲ್ಲಿ ಕಲರ್ ಇರೋದು ಪತ್ತೆ ಆಗಿದೆ. ಈ ಕೃತಕ ಕಲರ್ನಿಂದ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ ಎಂದು ಆಹಾರ ತಜ್ಞೆ ಡಾ. ಕೀರ್ತಿ ಹಿರಿಸಾವೆ ಹೇಳಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕೃತಕ ಬಣ್ಣ ಬೆರಕೆ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬಟಾಣಿ ವ್ಯಾಪಾರಿಗಳು, ನಾವು ಕೃತಕ ಬಣ್ಣ ಬಳಸಲ್ಲ. ನೈಸರ್ಗಿಕ ಬಣ್ಣ ಇರೋದನ್ನೇ ಮಾರಾಟ ಮಾಡ್ತೇವೆ ಎಂದಿದ್ದಾರೆ.
ಇಡ್ಲಿ ಹಾಗೂ ಬಟಾಣಿ ವಿಷಯ ಅರಗಿಸಿಕೊಳ್ಳುವ ಹೊತ್ತಿಗೆ ರಾಜ್ಯದ ಜನರಿಗೆ ಇನ್ನೊಂದು ಶಾಕಿಂಗ್ ಕಾದಿದೆ. ಕಲ್ಲಂಗಡಿ ಹಣ್ಣಿಗೂ ಕಲರ್ ಮಿಕ್ಸ್ ಮಾಡ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಯಾಂಪಲ್ಸ್ಗಳನ್ನ ಸಂಗ್ರಹ ಮಾಡ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೆ ಬರಬಹುದು ಕ್ಯಾನ್ಸರ್! ಆಘಾತಕಾರಿ ವರದಿ ಬಹಿರಂಗ
ಇದರ ಜತೆಗೆ ರಸ್ತೆ ಬದಿಯಲ್ಲಿ ಹಾಕಲಾಗುವ ಟ್ಯಾಟೂಗಳ ಮೇಲೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.. ಯಾಕಂದ್ರೆ ಈ ಟ್ಯಾಟೂನಿಂದ HIV, ಸ್ಕಿನ್ ಕ್ಯಾನ್ಸರ್, ಸ್ಕಿನ್ ಡಿಸೀಜ್ ಆಗ್ತಿದ್ದು, ಟ್ಯಾಟೂಗೆ ಹೊಸ ಕಾನೂನು ರಚಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಬೀದಿ ಬದಿ ಮಾರಾಟ ಮಾಡುವ ಕಾಸ್ಮೆಟಿಕ್ಗೂ ಹೊಸ ನಿಯಮಗಳು ಜಾರಿ ಆದರೂ ಅಚ್ಚರಿ ಇಲ್ಲ.