ಪ್ರಯಾಣ ದರ ಏರಿಕೆ ಪರಿಣಾಮ: ನಮ್ಮ ಮೆಟ್ರೋದಿಂದ ದೂರವುಳಿದ 6 ಲಕ್ಷ ಪ್ರಯಾಣಿಕರು!
ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಇದೀಗ ಸುಮಾರು ಆರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪರ್ಯಾಯ ಸಾರಿಗೆಗಳನ್ನು ಆಶ್ರಯಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದರೊಬ್ಬರು ಆರೋಪಿಸಿದ್ದಾರೆ. ದರ ಏರಿಕೆಯಿಂದಾಗಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಕೆಲವು ನಿಲ್ದಾಣಗಳ ನಡುವಿನ ದರವನ್ನು ಕಡಿಮೆ ಮಾಡಲಾಗಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿಲ್ಲ.

ಬೆಂಗಳೂರು, ಫೆಬ್ರವರಿ 22: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳದ ನಂತರ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಪ್ರತಿದಿನ ಆರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪರ್ಯಾಯ ಸಾರಿಗೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 9 ರಂದು ಜಾರಿಗೆ ಬರುವಂತೆ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಕೆಲವು ಸ್ಟೇಷನ್ಗಳ ಮಧ್ಯೆ ಪ್ರಯಾಣ ದರವನ್ನು ತುಸು ಇಳಿಕೆ ಮಾಡಲಾಗಿದೆ. ಆದರೂ ಪ್ರಯಾಣಿಕರ ಆಕ್ರೋಶ ತಣ್ಣಗಾಗಿಲ್ಲ. ಈ ಮಧ್ಯೆ, ತಕ್ಷಣ ಪ್ರಯಾಣ ದರವನ್ನು ಹಿಂಪಡೆಯಬೇಕೆಂದು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಬಿಎಂಆರ್‌ಸಿಎಲ್ ಅನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಿದ ಬಿಜೆಪಿ ನಾಯಕರು, ಮೆಟ್ರೋ ಬಳಕೆಯಲ್ಲಿನ ತೀವ್ರ ಕುಸಿತಕ್ಕೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಡ್ಡಿಪಡಿಸುವ ದುರುಪಯೋಗದ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಮೋಹನ್ ಅವರ ಪ್ರಕಾರ, ದರ ಪರಿಷ್ಕರಣೆಯ ನಂತರ ಸುಮಾರು 6.26 ಲಕ್ಷ ಪ್ರಯಾಣಿಕರು ಮೆಟ್ರೋವನ್ನು ತ್ಯಜಿಸಿದ್ದು, ಪರ್ಯಾಯ ಸಾರಿಗೆಗಳತ್ತ ಮುಖ ಮಾಡಿದ್ದಾರೆ.
ವಾರದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತ
ಬೆಂಗಳೂರು ಮೆಟ್ರೋದಲ್ಲಿ ವಾರದ ದಿನಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗಿದೆ. ದರ ಏರಿಕೆಯ ನಂತರ ಸಾವಿರಾರು ಪ್ರಯಾಣಿಕರು ಪರ್ಯಾಯ ಆಯ್ಕೆಗಳತ್ತ ಮುಖ ಮಾಡಿರುವುದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ. ಬಿಎಂಆರ್‌ಸಿಎಲ್ ಅಂಕಿಅಂಶಗಳ ಪ್ರಕಾರ, ಪರಿಷ್ಕೃತ ದರಗಳು ಜಾರಿಗೆ ಬಂದ ನಂತರದ ಮೊದಲ ವಾರ, ಫೆಬ್ರವರಿ 10 ರಿಂದ 14 ರವರೆಗಿನ ಸರಾಸರಿ ಪ್ರಯಾಣಿಕರ ಸಂಖ್ಯೆ 7.72 ಲಕ್ಷ. ಇದು ಅದಕ್ಕಿಂತ ಹಿಂದಿನ ಕೆಲಸದ ವಾರದಲ್ಲಿ (ಫೆಬ್ರವರಿ 4 – 8) ದಾಖಲಾದ 8.62 ಲಕ್ಷ ಪ್ರಯಾಣಿಕರಿಗಿಂತ ತೀವ್ರ ಕುಸಿತವನ್ನು ಸೂಚಿಸಿದೆ.
ವಾರಾಂತ್ಯದಲ್ಲೂ ಪ್ರಯಾಣಿಕರ ಸಂಖ್ಯೆ ಇಳಿಕೆ
ದರ ಹೆಚ್ಚಳದ ಪರಿಣಾಮವು ವಾರದ ದಿನಗಳಿಗೆ ಮಾತ್ರ ಸೀಮಿತವಾಗಿಲ್ಲ. ವಾರಾಂತ್ಯದ ಪ್ರಯಾಣಿಕರ ಸಂಖ್ಯೆಯೂ ಗಮನಾರ್ಹವಾಗಿ ಕಡಿಮೆಯಾಗಿದೆ. ಫೆಬ್ರವರಿ 15 ರ ಶನಿವಾರ 6.9 ಲಕ್ಷ ಮಂದಿ ಮೆಟ್ರೋ ಬಳಕೆ ಮಾಡಿದ್ದರು. ಫೆಬ್ರವರಿ 8 ರಂದು 8.07 ಲಕ್ಷ ಪ್ರಯಾಣಿಸಿದ್ದರು. ಭಾನುವಾರದ ಪ್ರಯಾಣಿಕರ ಸಂಖ್ಯೆಯೂ ಗಮನಾರ್ಹವಾಗಿ ಕುಸಿದಿದೆ. ಫೆಬ್ರವರಿ 2 ರಂದು 6.2 ಲಕ್ಷ ಮಂದಿ ಪ್ರಯಾಣಿಸಿದ್ದರೆ 16 ರಂದು ಕೇವಲ 5.3 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.