ಬೆಂಗಳೂರು, (ಜನವರಿ 03): ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆಯ ಬಿಸಿ ಕಾವೇರುತ್ತಿರುವ ಹೊತ್ತಲ್ಲೇ, ಇತ್ತ ರಾಜಧಾನಿಯ ಜನರಿಗೆ ಜಲಮಂಡಳಿ ಶಾಕ್ ಕೊಡೋಕೆ ಸಜ್ಜಾಗಿನಿಂತಿದೆ. 2014 ರ ಬಳಿಕ ನೀರಿನ ದರ ಪರಿಷ್ಕರಿಣೆಯಾಗಿಲ್ಲ ಎಂದು ಕಾರಣ ಹೇಳುತ್ತಿರುವ ಜಲಮಂಡಳಿ, ಇದೀಗ ಸರ್ಕಾರದ ಮಧ್ಯಸ್ಥಿಕೆಯಲ್ಲೇ ನೀರಿನ ದರ ಪರಿಷ್ಕರಣೆ ಮಾಡೋ ಮೂಲಕ ಸಿಟಿಮಂದಿಗೆ ದರಯೇರಿಕೆಯ ಬರೆ ಎಳೆಯೋಕೆ ತಯಾರಿ ನಡೆಸಿದೆ. ಸದ್ಯ ಜನವರಿ 2ನೇ ವಾರದಲ್ಲಿ ಶಾಸಕರ ಜೊತೆ ಸಭೆ ನಡೆಸಲಿರೋ ಡಿಸಿಎಂ ಡಿ.ಕೆ.ಶಿವಕುಮಾರ್, ನೀರಿನ ದರ ಏರಿಕೆಯ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ದಟ್ಟವಾಗಿದ್ದು, ಇತ್ತ ಜಲಮಂಡಳಿ ಕೂಡ ದರಯೇರಿಕೆ ಸುಳಿವು ಕೊಟ್ಟಿದೆ.
ಸದ್ಯ ನೀರಿನ ದರ ಏರಿಕೆಯ ಬಗ್ಗೆ ಇತ್ತೀಚೆಗಷ್ಟೇ ಬೆಂಗಳೂರಿನ 27 ಶಾಸಕರಿಗೆ ಪತ್ರ ಬರೆದಿದ್ದ ಜಲಮಂಡಳಿ, ಡಿಸಿಎಂ ಸಭೆಯಲ್ಲಿ ದರಯೇರಿಕೆಗೆ ಬೆಂಬಲ ಕೊಡಿ ಎಂದು ಮನವಿ ಮಾಡಿತ್ತು, ಇತ್ತ ಜಲಮಂಡಳಿಯ ಮನವಿಗೆ ಶಾಸಕರು ಕೂಡ ಎಸ್ ಅಂದಿದ್ರು, ಇದರಿಂದ ಈ ತಿಂಗಳಲ್ಲೇ ನಡೆಯೋ ಸಭೆಯಲ್ಲಿ ನೀರಿನ ದರ ಪರಿಷ್ಕರಣೆಯಾಗೋದು ಪಕ್ಕ ಎನ್ನಲಾಗುತ್ತಿದೆ. ಸದ್ಯ ಸಾಲು ಸಾಲು ಬೆಲೆಯೇರಿಕೆಯ ಬಿಸಿಯಿಂದ ತತ್ತರಿಸಿರೋ ಸಿಟಿಮಂದಿಗೆ, ಇದೀಗ ನೀರಿನ ದರ ಏರಿಕೆಯ ಹೊರೆ ಹೊರುವ ಸ್ಥಿತಿ ಕೂಡ ಎದುರಾಗೋಕೆ ಕೌಂಟ್ ಡೌನ್ ಶುರುವಾಗಿದೆ.
ಇದನ್ನೂ ಓದಿ: ಜ.5ರಿಂದಲೇ KSRTC, BMTC ಟಿಕೆಟ್ ದರ ಹೆಚ್ಚಳ ಜಾರಿ: ನಿಮ್ಮ ಊರಿಗೆ ಎಷ್ಟು ರೇಟ್ ?
ಇನ್ನು ನೀರಿನ ಪೂರೈಕೆಗೆ ಬಳಸ್ತಿರೋ ವಿದ್ಯುತ್ ಶಕ್ತಿಯ ದರವನ್ನ ಭರಿಸೋಕೆ ಆಗುತ್ತಿಲ್ಲ. ನೀರಿನ ಪೂರೈಕೆಯಲ್ಲಿ ವಿದ್ಯುತ್ ದರ ಹೊರೆಯಾಗ್ತಿರೋದರಿಂದ ನೀರಿನ ದರ ಏರಿಕೆ ಅನಿವಾರ್ಯ ಎಂದು ಜಲಮಂಡಳಿ ಹೇಳುತ್ತಿದ್ದರೆ, ಇತ್ತ ಈಗಾಗಲೇ ದುಬಾರಿ ದುನಿಯಾದಿಂದ ಕಂಗೆಟ್ಟಿದ್ದ ಸಿಟಿಮಂದಿ, ಇದೀಗ ನೀರಿನ ದರ ಏರಿಕೆಯ ಬರೆ ಕೂಡ ಬೀಳುತ್ತೆ ಅನ್ನೋ ವಿಚಾರ ಕೇಳಿ ಕಂಗಾಲಾಗಿಬಿಟ್ಟಿದ್ದಾರೆ. ಬರುವ ಸಂಬಳದಲ್ಲಿ ಎಲ್ಲವನ್ನ ನಿರ್ವಹಣೆ ಮಾಡಿಕೊಂಡು ಹೋಗ್ತಿರೋ ಜನರಿಗೆ ನೀರಿನ ದರ ಹೆಚ್ಚಾದ್ರೆ ಸಮಸ್ಯೆ ತಟ್ಟುತ್ತೆ ಎಂದು ಕಿಡಿಕಾರುತ್ತಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮೆಟ್ರೋ ಜಾಲ ವಿಸ್ತರಣೆ ಆಗುತ್ತಲೇ ಇದೆ. ಪ್ರತಿದಿನ ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಒಂಭತ್ತು ಲಕ್ಷ ದಾಟಿದೆ. ಆದರೆ ನಿರ್ವಹಣಾ ವೆಚ್ಚ ಹೆಚ್ಚಾಗಿದ್ಯಂತೆ, ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಲು ಬಿಎಂಆರ್ಸಿಎಲ್ ಮುಂದಾಗಿದ್ದು, ಜನವರಿ ಎರಡನೇ ವಾರದಲ್ಲಿ ನಡೆಯುವ ಬೋರ್ಡ್ ಮೀಟಿಂಗ್ ನಲ್ಲಿ ಹೊಸ ದರ ಜಾರಿಯಾಗುವ ಎಲ್ಲಾ ಸಾಧ್ಯತೆಗಳಿದ್ಯಂತೆ.
ಕಳೆದ ಏಳು ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ, ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಲು ನಮ್ಮ ಮೆಟ್ರೋ ಕಮಿಟಿ ರಚನೆ ಮಾಡಿತ್ತು, ಅಕ್ಟೋಬರ್ 3 ರಿಂದ 28ರ ವರೆಗೆ ಪ್ರಯಾಣಿಕರ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗಿತ್ತು. ಪ್ರಯಾಣಿಕರ ಅಭಿಪ್ರಾಯವನ್ನು ಸಂಗ್ರಹಿಸಿರುವ ಕಮಿಟಿ, ಆ ವರದಿಯನ್ನು ಡಿಸೆಂಬರ್ ಕೊನೆ ವಾರದಲ್ಲಿ ಬಿಎಂಆರ್ಸಿಎಲ್ ಗೆ ಸಲ್ಲಿಸಲಿದ್ದು, ಜನವರಿ ಎರಡನೇ ವಾರದಲ್ಲಿ ಕಮಿಟಿ ನೀಡಿದ ವರದಿಯನ್ನು ಬಿಎಂಆರ್ಸಿಎಲ್ ಬೋರ್ಡ್ ಮೀಟಿಂಗ್ ನಲ್ಲಿಟ್ಟು.15% ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ನಮ್ಮ ಮೆಟ್ರೋ ಪ್ಲಾನ್ ಮಾಡಿಕೊಂಡಿದೆ. ಬೋರ್ಡ್ ಮೀಟಿಂಗ್ ನಲ್ಲಿ ಗ್ರೀನ್ ಸಿಗ್ನಲ್ ನೀಡಿದ್ದೆ ಜನವರಿ ಎರಡನೇ ವಾರದಿಂದ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.
ಇನ್ನೂ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ10 ರೂ ಗರಿಷ್ಠ60 ರೂ ಪ್ರಯಾಣ ದರ ನಿಗದಿ ಮಾಡಲಾಗಿದೆ. ಕಾರ್ಯಾಚರಣೆ ವೆಚ್ಚ ಅಧಿಕವಾದ ಕಾರಣದಿಂದ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿದೆ. ಅಕ್ಟೋಬರ್-3 ರಿಂದ ಅ 28 ರವರೆಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಿರುವ ನಮ್ಮ ಮೆಟ್ರೋ. ಸಾರ್ವಜನಿಕ ಅಭಿಪ್ರಾಯ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರಂತೆ,ಜನರ ಆಕ್ಷೇಪ ನಡುವೆ ದರ ಹೆಚ್ಚಳಕ್ಕೆ ಅಸ್ತು ಎಂದಿರುವ ದರ ನಿಗದಿ ಸಮಿತಿ. ಹೀಗಾಗಿ ಶೇ 15% ರಷ್ಟು ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಾಧ್ಯತೆ ಇದೆ. ಕನಿಷ್ಠ ದರ 15 ಗರಿಷ್ಠ ದರ 75 ರೂ ಪರಿಷ್ಕರಣೆ ಸಾಧ್ಯತೆ.
ಬೆಂಗಳೂರು: ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಮತ್ತೆ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಮುಂದಾಗಿದೆ. ಪ್ರತಿ ಲೀಟರ್ ಹಾಲಿನ ದರದಲ್ಲಿ5 ರೂ. ಏರಿಕೆ ಮಾಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಕೆಎಂಎಫ್, ಆರು ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿನಂದಿನಿ ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ಆರಂಭಿಸಿತ್ತು. ಈಗ ರೈತರ ಹಿತದೃಷ್ಟಿಯಿಂದ ಹಾಲಿನ ದರ ಪರಿಷ್ಕರಿಸಲು ಮುಂದಾಗಿದೆ. ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 5 ರೂ. ಹೆಚ್ಚಳವಾಗುವ ಬಗ್ಗೆ ಕೆಎಂಎಫ್ ಅಧ್ಯಕ್ಷ ಎಲ್.ಭೀಮಾ ನಾಯ್ಕ್ ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಬೆಸ್ಕಾಂ) ಸೇರಿ ಕರ್ನಾಟಕದ ಎಲ್ಲ ಎಸ್ಕಾಂಗಳು ವಿದ್ಯುತ್ ದರ ಏರಿಕೆಗೆ ಪ್ಲ್ಯಾನ್ ಮಾಡಿವೆ. ಮುಂದಿನ ಮೂರು ವರ್ಷಗಳಿಗೆ ಅನುಗುಣವಾಗುವಂತೆ ಪ್ರತಿ ಯುನಿಟ್ ದರ ಏರಿಕೆಗೆ ಮುಂದಾಗಿವೆ. 2025-26 ರಲ್ಲಿ ಪ್ರತಿ ಯೂನಿಟ್ ಗೆ 67 ಪೈಸೆ, 2026-27 ರಲ್ಲಿ ಪ್ರತಿ ಯೂನಿಟ್ಗೆ 75 ಪೈಸೆ ಹಾಗೂ 2027-28 ರಲ್ಲಿ 91 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನ.30 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಎಲ್ಲಾ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ. ದರ ಏರಿಕೆ ಒಟ್ಟೊಟ್ಟಿಗೆ ಬಹುತೇಕ ಏಕ ಮಾದರಿಯಲ್ಲಿಯೇ ಆಗಲಿದೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ.
ಮುಂದಿನ ಮೂರು ವರ್ಷಗಳ ಕಾಲ ಕ್ರಮವಾಗಿ ಪ್ರತಿ ಯುನಿಟ್‌ಗೆ 67 ಪೈಸೆ, 75 ಪೈಸೆ ಹಾಗೂ 91 ಪೈಸೆಯಂತೆ ದರ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಮನವಿ ಸಲ್ಲಿಸಿದೆ. ತನ್ನ ದರ ಪರಿಷ್ಕರಣೆಯ ಮನವಿ ಪ್ರಸ್ತಾವನೆಯಲ್ಲಿ ಮುಂದಿನ ವರ್ಷದಲ್ಲಿ (2025-26) ಬೆಸ್ಕಾಂಗೆ 2,572.69 ಕೋಟಿ ರು.ಗಳಷ್ಟು ಆದಾಯ ಕೊರತೆ ಉಂಟಾಗಲಿದೆ. ಇದನ್ನು ನೀಗಿಸಲು 2025ರ ಏ.1ರಿಂದ ಅನ್ವಯವಾಗುವಂತೆ 2025-26ರ ಸಾಲಿಗೆ ಪ್ರತಿ ಯುನಿಟ್‌ಗೆ 67 ಪೈಸೆಯಂತೆ ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದೆ.
ಇದೇ ಜನವರಿ 5ರಿಂದ ಬಸ್ ಟಿಕೆಟ್ ದರ ಹೆಚ್ಚಳ ಜಾರಿಗೆ ಬೆನ್ನಲ್ಲೇ ಉಳಿದ ನಮ್ಮ ಮೆಟ್ರೋ, ನೀರಿನ ದರ, ವಿದ್ಯುತ್ ದರ, ಹಾಲಿನ ದರವೂ ಸಹ ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವಣೆಗಳು ಹೋಗಿದ್ದು, ಈ ತಿಂಗಳಲ್ಲಿ ಅಧಿಕೃತವಾಗಿ ದರ ಏರಿಕೆಯಾಗುವುದು ಖಚಿತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ