ಬೆಂಗಳೂರು, ಜೂನ್ 27: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲಿನ ದರ ಏರಿಕೆ ಘೋಷಿಸಿದ ಒಂದು ದಿನದ ನಂತರ, ಬೆಂಗಳೂರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘ ಆ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಹಾಲಿನ ದರ ಹೆಚ್ಚಳದಿಂದ ಹೋಟೆಲ್ಗಳಲ್ಲಿ ಕಾಫಿ, ಚಹಾ ಮತ್ತಿತರ ಪಾನೀಯಗಳ ದರ ಏರಿಕೆಯಾಗಬುದೆಂದು ಗ್ರಾಹಕರು ಆತಂಕದಲ್ಲಿದ್ದರು. ಇದೇ ಸಂದರ್ಭದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘ ಸ್ಪಷ್ಟನೆ ನೀಡಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಾಫಿ ಮತ್ತು ಚಹಾದ ಬೆಲೆಯನ್ನು ಹೆಚ್ಚಿಸುವುದಿಲ್ಲ ಎಂದು ಸಂಘ ಹೇಳಿದೆ. ಕೆಎಂಎಫ್ ಹಾಲಿನ ದರವನ್ನು ಹೆಚ್ಚಿಸಿಲ್ಲ. ಅರ್ಧ / ಒಂದು ಲೀಟರ್ ಪ್ಯಾಕೆಟ್‌ಗೆ 50 ಎಂಎಲ್ ಹಾಲು ಹೆಚ್ಚು ಸೇರಿಸಿದೆ ಮತ್ತು ಅದಕ್ಕೆ ಹೆಚ್ಚು ಶುಲ್ಕ ವಿಧಿಸುತ್ತಿದೆ. ಇದರಿಂದ ಹೋಟೆಲ್ ಮಾಲೀಕರಿಗೆ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ ಎಂದು ಎಂದು ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ವಾಸ್ತವದಲ್ಲಿ ನಾವು ಕಡಿಮೆ ಹಾಲು ಖರೀದಿಸುತ್ತೇವೆ. ಉದಾಹರಣೆಗೆ, ಈ ಹಿಂದೆ ಒಂದು ಹೋಟೆಲ್ 100 ಲೀಟರ್ ಖರೀದಿಸಿಸುತ್ತಿದ್ದರೆ, ಅದು ಈಗ ಕೇವಲ 95 ಲೀಟರ್ ಖರೀದಿಸುತ್ತಿದೆ. ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಹಲವು ಕಡೆಗಳಲ್ಲಿ ಹಾಲಿನ ಅಂಗಡಿಗಳಲ್ಲಿ 2 ರೂ. ಹೆಚ್ಚು ನೀಡಲು ಗ್ರಾಹಕರು ತಗಾದೆ ತೆಗೆದ ವಿದ್ಯಮಾನಗಳೂ ವರದಿಯಾಗಿವೆ. ಕೆಎಂಎಫ್ ಪ್ರತಿ ಪ್ಯಾಕೆಟ್‌ನಲ್ಲಿ ಹೆಚ್ಚುವರಿ 50 ಎಂಎಲ್ ಹಾಲು ನೀಡುವುದಾಗಿ ಘೋಷಿಸಿದೆ. ಆದರೆ ಪ್ಯಾಕೆಟ್‌ನಲ್ಲಿ ಅದರ ಉಲ್ಲೇಖವಿಲ್ಲ. ಇನ್ನೂ 500 ಎಂಎಲ್ ಅಥವಾ 1000 ಎಂಎಲ್ ಎಂದೇ ಇದೆ. ಹೀಗಿದ್ದಾಗ ಪ್ಯಾಕೆಟ್‌ನಲ್ಲಿ 50 ಎಂಎಲ್ ಹೆಚ್ಚು ಹಾಲು ಇದೆ ಎಂದು ನಾವು ಹೇಗೆ ನಂಬಬಹುದು? ಬದಲಾವಣೆ ಮಾಡಿದರೆ, ಪ್ಯಾಕೆಟ್ ಹೊಸ ಬೆಲೆ ಮತ್ತು ಪ್ರಮಾಣವನ್ನು ಅದರ ಮೇಲೆ ಮುದ್ರಿಸಬೇಕು ಎಂದು ಗ್ರಾಹಕರಾದ ರೂಪಾ ಪಿ ಆಗ್ರಹಿಸಿರುವುದನ್ನು ವರದಿ ಉಲ್ಲೇಖಿಸಿದೆ.
ಹೆಚ್ಚು ದರ ವಿಧಿಸಿ ಹೆಚ್ಚುವರಿ ಹಾಲು ಖರೀದಿಸುವಂತೆ ಸರ್ಕಾರ ಒತ್ತಾಯಿಸುತ್ತಿದೆ. ನಮ್ಮಲ್ಲಿ ಹಲವರು ಹೆಚ್ಚುವರಿ ಹಾಲು ಬಯಸುವುದಿಲ್ಲ. ಸರ್ಕಾರ ತನ್ನ ನಿರ್ಧಾರಗಳನ್ನು ನಮ್ಮ ಮೇಲೆ ಹೇರುವಂತಿಲ್ಲ. ನನ್ನ ಅಪಾರ್ಟ್ಮೆಂಟ್ ಸಮುಚ್ಚಯದ ಜನರು ಹಾಲಿನ ಬ್ರಾಂಡ್ ಅನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಮತ್ತೋರ್ವ ಗ್ರಾಹಕರು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಚುವರಿ ಹಾಲು, ಹೆಚ್ಚು ಬೆಲೆಯೆಂದ ಸಿಎಂ; ಯಾವ ಪ್ಯಾಕೆಟ್‌ಗೆ ಎಷ್ಟು ದರ? ಇಲ್ಲಿದೆ ಪಟ್ಟಿ
ಹೆಚ್ಚುವರಿ ಹಾಲು ಸಂಗ್ರಹಣೆ ಸಮಸ್ಯೆ ನಿವಾರಣೆಗೆ ಕೆಎಂಎಫ್ ಮತ್ತು ಸರ್ಕಾರ ಪರ್ಯಾಯ ಪರಿಹಾರಕ್ಕೆ ಮುಂದಾಗಬೇಕಿತ್ತು. ಅಲ್ಲದೆ, ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಬಯಸಿದರೆ, ಅದು ಪ್ರಾಮಾಣಿಕವಾಗಿ ಮಾತನಾಡಬೇಕು. ಇದರಿಂದ ಜನರು ಪರದಾಡುವಂತಾಗಿದೆ ಎಂದು ಮತ್ತೊಬ್ಬ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ