ಶಕ್ತಿ ಯೋಜನೆ ದುರುಪಯೋಗ: ಕಂಡಕ್ಟರ್ಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾದ ಸಾರಿಗೆ ಇಲಾಖೆ
ಮಹಿಳೆಯರ ಅನುಕೂಲಕ್ಕೆಂದು ಸರ್ಕಾರ ಹಮ್ಮಿಕೊಂಡ ಶಕ್ತಿ ಯೋಜನೆ ಈಗ ನಿರ್ವಾಹಕರಿಂದ ದುರುಪಯೋಗವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಹಾಗಾದರೆ, ಕಂಡಕ್ಟರ್ಗಳು ಏನು ಮಾಡುತ್ತಾರೆ? ಹೆಚ್ಚು ಟಿಕೆಟ್ ನೀಡಿ ತಾವೇ ಹಣ ಗುಳುಂ ಮಾಡುತ್ತಿದ್ದಾರಾ? ಈಗ ಸರ್ಕಾರ ಏನು ಕ್ರಮಕ್ಕೆ ಮುಂದಾಗಿದೆ? ಉತ್ತರ ಇಲ್ಲಿದೆ.

ಬೆಂಗಳೂರು, ಜೂನ್ 27: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಒದಗಿಸಿದ ಶಕ್ತಿ ಯೋಜನೆ ದುರುಪಯೋಗವಾಗುತ್ತಿರುವ ಆರೋಪ ಕೇಳಿಬಂದಿದೆ. ಮಹಿಳಾ ಪ್ರಯಾಣಿಕರು ಇಲ್ಲದೇ ಇದ್ದರೂ ಟಿಕೆಟ್ ಬರೆಯುವುದು, ಒಂದಕ್ಕಿಂತ ಹೆಚ್ಚು ಟಿಕೆಟ್ ನೀಡಿ ದುಡ್ಡು ಮಾಡುವ ಕೃತ್ಯ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಇದೀಗ ಅಂಥ ನಿರ್ವಾಹಕರ ವಿರುದ್ಧ ಕಠಿಣ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.
ಬಸ್ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇಲ್ಲದಿದ್ದರೂ ಹೆಚ್ಚು ಟಿಕೆಟ್ ವಿತರಣೆಯಾಗುತ್ತಿರುವ ಆರೋಪಗಳು ಕೇಳಿಬಂದ ಬೆನ್ನಲ್ಲೇ ಕೆಎಸ್ಆರ್ಟಿಸಿ ಸೇರಿದಂತೆ ಇತರ ಸಾರಿಗೆ ನಿಗಮಗಳು ಎಚ್ಚೆತ್ತುಕೊಂಡಿದ್ದು, ಇದೀಗ ನಿರ್ವಾಹಕರಿಗೆ ಎಚ್ಚರಿಕೆ ನೀಡಿವೆ. ಜತೆಗೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕೆಕೆಆರ್ಟಿಸಿ ಈಗಾಗಲೇ ಆದೇಶ ಹೊರಡಿಸಿದೆ.
ಮಹಿಳೆಯರಿಗೆ ಉಚಿತ ಟಿಕೆಟ್ ನೀಡದಿದ್ದರೆ ಕಂಡಕ್ಟರ್ಗಳು ದಂಡ ಕಟ್ಟಬೇಕಾಗುತ್ತದೆ. ತಪ್ಪಿತಸ್ಥ ಕಂಡಕ್ಟರ್ಗಳಿಗೆ ಯಾವ ರೀತಿ ಶಿಕ್ಷೆ ವಿಧಿಸಬೇಕು ಎಂಬ ಕುರಿತು ಕೆಕೆಆರ್ಟಿಸಿ ಈಗಾಗಲೇ ಆದೇಶ ಹೊರಡಿಸಿದೆ.
ಕಂಡಕ್ಟರ್ಗಳಿಗೆ ಶಿಕ್ಷೆ ಏನು?
- ಉಚಿತ ಮಹಿಳಾ ಟಿಕೆಟ್ ಪ್ರಕರಣದಲ್ಲಿ ನಿಯಮ 22 ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದು.
- 2 ಕ್ಕಿಂತ ಹೆಚ್ಚಿನ ಉಚಿತ ಮಹಿಳಾ ಟಿಕೆಟ್ ಪ್ರಕರಣದಲ್ಲಿ ಸೋರಿಕೆ ಮೊತ್ತದ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದು.
- ಮಹಿಳಾ ಉಚಿತ ಟಿಕೆಟ್ ವಿತರಿಸದೇ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದು.
- 2 ಕ್ಕಿಂತ ಹೆಚ್ಚಿನ ಟಿಕೆಟ್ ನೀಡದೇ ಇರುವ ಪಕ್ಷದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವುದು.
- ಇಂತಹ ಪ್ರಕರಣದಲ್ಲಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ, ನ್ಯೂನತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ಮೆಮೋ ನೀಡಿ ಕ್ರಮಕೈಗೊಳ್ಳುವುದು.
ಇದನ್ನೂ ಓದಿ: ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಶುಭ ಸುದ್ದಿ; ಬರಲಿವೆ ಹೆಚ್ಚುವರಿ ಬಸ್
ಶಕ್ತಿ ಯೋಜನೆ ಜಾರಿಯ ನಂತರ ರಾಜ್ಯದ ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿತ್ತು. ನಂತರದಲ್ಲಿ ಶಕ್ತಿ ಯೋಜನೆ ದುರುಪಯೋಗವಾಗುತ್ತಿರುವ ಬಗ್ಗೆಯೂ ಆರೋಪಗಳು ಕೇಳಿಬಂದವು. ಇದರ ಬೆನ್ನಲ್ಲೇ ನಿಗಮಗಳು ಎಚ್ಚೆತ್ತುಕೊಂಡಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



