ಹೆಚ್ಚುವರಿ ಹಾಲು, ಹೆಚ್ಚು ಬೆಲೆಯೆಂದ ಸಿಎಂ; ಯಾವ ಪ್ಯಾಕೆಟ್ಗೆ ಎಷ್ಟು ದರ? ಇಲ್ಲಿದೆ ಪಟ್ಟಿ
ಕರ್ನಾಟಕದಲ್ಲೀಗ ನಂದಿನಿ ಹಾಲಿನ ಬೆಲೆ ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ. ಒಂದೆಡೆ ಪ್ರತಿಪಕ್ಷ ಬಿಜೆಪಿ ಹಾಲಿನ ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಮತ್ತೊಂದೆಡೆ, ಹೆಚ್ಚು ಹಾಲು ನೀಡಿ ಹೆಚ್ಚು ದರ ಪಡೆಯುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿದ್ದಾರೆ. ಹಾಗಾದರೆ, ನಂದಿನಿ ಹಾಲಿನ ಯಾವ ಪ್ಯಾಕೆಟ್ಗೆ ಈಗ ಎಷ್ಟಿದೆ ಬೆಲೆ ಎಂಬ ಪಟ್ಟಿ ಇಲ್ಲಿದೆ.
ಬೆಂಗಳೂರು, ಜೂನ್ 26: ರಾಜ್ಯದಲ್ಲಿ ನಂದಿನಿ ಹಾಲಿನ (Nandini Milk) ದರ ಏರಿಕೆ ಆಗಿಲ್ಲ. ಹೆಚ್ಚುವರಿಯಾಗಿ 50 ಎಂಎಲ್ ಹಾಲನ್ನು ನೀಡಿ, ಆ ಹಾಲಿಗೆ 2 ರೂಪಾಯಿ ಪಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಮಾಡಲು ಹೆಚ್ಚುವರಿ 50 ಎಂಎಲ್ ಹಾಲು ನೀಡುತ್ತಿದ್ದೇವೆ. ಅರ್ಧ ಲೀಟರ್ ಪ್ಯಾಕೆಟ್ನಲ್ಲಿ 550 ಎಂಎಲ್ ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ಒಂದು ಲೀಟರ್ ಪ್ಯಾಕೆಟ್ ಬದಲಿಗೆ ಇನ್ನು 1050 ಎಂಎಲ್ ನೀಡುತ್ತೇವೆ. ರೈತರಿಂದ ಹಾಲು ಪಡೆಯಲ್ಲ ಎಂದು ಹೇಳಲು ಆಗುತ್ತದೆಯೇ ಎಂದು ಅವರು ಹೇಳಿದ್ದಾರೆ.
ಹಾಲಿನ ಬೆಲೆ ಏರಿಕೆ ಮಾಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಈ ಸ್ಪಷ್ಟನೆ ನೀಡಿದ್ದಾರೆ.
ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಿ 2 ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಮಂಗಳವಾರ ಘೊಷಿಸಿತ್ತು.
ನಂದಿನಿ ಹಾಲಿನ ಪರಿಷ್ಕೃತ ದರ ಪಟ್ಟಿ ಇಲ್ಲಿದೆ (ದರ ರೂಪಾಯಿಗಳಲ್ಲಿದೆ)
ನಂದಿನ ಹಾಲಿನ ಮಾದರಿ | ಪ್ರಸ್ತುತ ದರ 500 ಎಂಎಲ್ಗೆ | 550 ಎಂಎಲ್ ದರ | ಪ್ರಸ್ತುತ ದರ 1000 ಎಂಎಲ್ಗೆ | 1050 ಎಂಎಲ್ ದರ |
ಟೋನ್ಡ್ ಹಾಲು | 22 | 24 | 42 | 44 |
ಹೋಮೋಜಿನೈಸ್ಡ್ ಟೋನ್ಡ್ ಹಾಲು | 22 | 24 | 43 | 45 |
ಹೋಮೋಜಿನೈಸ್ಡ್ ಹಸುವಿನ ಹಾಲು | 24 | 26 | 46 | 48 |
ಸ್ಪೆಷಲ್ ಹಾಲು | 25 | 27 | 48 | 50 |
ಶುಭಂ ಹಾಲು | 25 | 27 | 48 | 50 |
ಸಮೃದ್ಧಿ ಹಾಲು | 26 | 28 | 51 | 53 |
ಹೋಮೋಜಿನೈಸ್ಡ್ ಶುಭಂ ಹಾಲು | 25 | 27 | 49 | 51 |
ಸಂತೃಪ್ತಿ ಹಾಲು | 28 | 30 | 55 | 57 |
ಶುಭಂ ಗೋಲ್ಡ್ ಹಾಲು | 26 | 28 | 49 | 51 |
ಡಬಲ್ ಟೋನ್ಡ್ ಹಾಲು | 21 | 23 | 41 | 43 |
ಬಿಜೆಪಿಯವರು ರೈತರ ವಿರೋಧಿಗಳು; ಡಿಕೆಶಿ
ನಂದಿನಿ ಹಾಲಿನ ದರ ಏರಿಕೆಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ರೈತರ ವಿರೋಧಿಗಳು ಎಂದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಾಸ್ತಿಯಾಗಿರುವ 2 ರೂ. ರೈತರಿಗೆ ತಲುಪುತ್ತದೆ. ರೈತರಿಗೆ ಹಣ ತಲುಪುವಿದಲ್ಲ ಎಂದು ಯಾರು ಹೇಳಿದರು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಂದಿನಿ ಹಾಲಿನ ದರ ಹೆಚ್ಚಳ; ಕೆಎಂಎಫ್ನಿಂದ ಬೆಲೆ ಏರಿಕೆ ಬರೆ
ಕೆಎಂಎಫ್ ಉಳಿದರೆ ರೈತರು ಉಳಿದಂತೆ. ರೈತರು ಸಾಲದಿಂದ ಹಸುಗಳನ್ನು ಮಾರಾಟ ಮಾಡ್ತಿದ್ದಾರೆ. ಬಿಜೆಪಿಯವರ ರೈತ ವಿರೋಧಿ ಧೋರಣೆ ಎದ್ದು ಕಾಣುತ್ತದೆ. ಬೇರೆ ರಾಜ್ಯದಲ್ಲಿ ಎಷ್ಟಿದೆ ನೋಡಲಿ, ಮಾಹಿತಿ ಪಡೆಯಲಿ ಎಂದು ಅವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ