ಗಡಿ ಜಿಲ್ಲೆ ಬೀದರ್ ಕ್ಷೇತ್ರದ ಸಂಸದ ಭಗವಂತ ಖೂಬಾ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತ, ಅಪ್ಪಟ ಹಿಂದುತ್ವ ವಾದಿ ಎಂದೇ ಇವರನ್ನು ಕಾರ್ಯಕರ್ತರು ಗುರುತಿಸುತ್ತಾರೆ. ಬೀದರ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು ತುಮಕೂರಿನ ಎಸ್ಐಟಿಯಲ್ಲಿ (ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಸಾರ್ವಜನಿಕ ಬದುಕಿನ ಆರಂಭಿಕ ದಿನಗಳಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಸಂಘ ಪರಿವಾರದ ಜೊತೆಗೂ ನಂಟು ಹೊಂದಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಹತ್ತಾರು ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದರು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದ್ದರು. ದೇಶದಲ್ಲಿಯೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಬೀದರ್ನ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆವಿಮೆ ಮಾಡಿಸಿದ್ದರು. ಪ್ರಧಾನ ಮಂತ್ರಿ ಸಹ ಬೀದರ್ ಸಂಸದ ಭಗವಂತ್ ಖೂಬಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕೊವಿಡ್ ಸಮಯದಲ್ಲಿ ಜಿಲ್ಲಾ ಉಸ್ತುವಾರಿಗಳ ಜೊತೆಗೆ ಪದೇಪದೆ ಮೀಟಿಂಗ್ ಮಾಡಿ, ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಬರುವ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ್ದರು. ಇವರ ಕಾರ್ಯಕ್ಷಮತೆಯನ್ನು ಹೈಕಮಾಂಡ್ ಮೆಚ್ಚಿಕೊಂಡಿತ್ತು. ಇದೇ ಕಾರಣಕ್ಕೆ ಸಚಿವ ಸ್ಥಾನ ಒಲಿದು ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಲಿಂಗಾಯತ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ವೀರಶೈವ ಲಿಂಗಾಯತ ನಾಯಕರಾಗಿ ಮುಂದಿನ ದಿನಗಳಲ್ಲಿ ಇವರನ್ನು ಬೆಳೆಸುವ ಉದ್ದೇಶದಿಂದ ಮತ್ರಿ ಸ್ಥಾನ ನೀಡಲಾಗಿದೆ ಎಂದೂ ಹೇಳಲಾಗುತ್ತಿದೆ. ಸಂಸದ ಭಗವಂತ್ ಖೂಬಾ ಕಳೆದ ಎರಡು ಬಾರಿಯೂ ಘಟಾನುಘಟಿ ನಾಯಕರನನ್ನು ಸೋಲಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿಯ ಉನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗ ಗುರು ಬಾಬಾ ರಾಮದೇವ್ ಅವರಿಗೆ ತೀರಾ ನಿಕಟವಾಗಿದ್ದಾರೆ ಎಂದು ಹೇಳಲಾಗುತ್ತದೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ವಿರುದ್ಧ ಮತ್ತೆ ಜಯ ಸಾಧಿಸಿದ್ದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ, ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜನ್ಧನ್ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಹೀಗೆ ಕೇಂದ್ರದ ಎಲ್ಲಾ ಯೋಜನೆಗಳನ್ನು ಆದ್ಯತೆಯ ಮೇರೆಗೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರುವ, ಜನರಿಗೆ ಅದರ ಲಾಭ ಸಿಗುವಂತೆ ಮಾಡುವ ಪ್ರಾಮಾಣಿಕ ಕೆಲಸವನ್ನು ಭಗವಂತ್ ಮಾಡಿದ್ದರು. ಕೇಂದ್ರದ ಹತ್ತಾರು ಮಂತ್ರಿಗಳ ಜೊತೆಗೆ ನಿಕಟ ಸಂಪರ್ಕ ಸಾಧಿಸಿದ್ದ ಖೂಬಾ ಜಿಲ್ಲೆಗೆ ಕೇಂದ್ರದಿಂದ ಬರುವ ಸೌಲಭ್ಯಗಳ ಅನುಷ್ಠಾನಕ್ಕೂ ಶ್ರಮಿಸಿದ್ದರು. ಪ್ರಬಲ ಲಿಂಗಾಯತ ಸಮುದಾಯದ ನಾಯಕರಾದ ಖೂಬಾ ಅವರಿಗೆ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರ ಬೆಂಬಲ ಇವರಿಗಿದೆ.
(ಬರಹ: ಸುರೇಶ್ ನಾಯ್ಕ್)
(Narendra Modi Cabinet Expansion Bhagawanth Khuba of Bidar became Union Minister)
ಇದನ್ನೂ ಓದಿ: A Narayanaswamy Profile: ದಲಿತ ನಾಯಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ, ಚಿತ್ರದುರ್ಗ ಕ್ಷೇತ್ರಕ್ಕೆ ಮೊದಲ ಸಂಪುಟ ಗೌರವ
ಇದನ್ನೂ ಓದಿ: ಕೇರಳ ಮೂಲ, ಬೆಂಗಳೂರು ವಾಸ್ತವ್ಯ: ನೂತನ ಸಚಿವ ರಾಜೀವ್ ಚಂದ್ರಶೇಖರ್ ಟೆಕಿ, ಉದ್ಯಮಿಯೂ ಹೌದು