ಬಾಂಗ್ಲಾದೇಶ ಅರಾಜಕತೆಯಿಂದ ಕರ್ನಾಟಕದ ಗಾರ್ಮೆಂಟ್ಸ್ ಕ್ಷೇತ್ರಕ್ಕೆ ಪ್ರಯೋಜನ!

|

Updated on: Aug 08, 2024 | 10:50 AM

ಬಾಂಗ್ಲಾದೇಶದಲ್ಲಿ ರಾಜಕೀಯ ಅನಿಶ್ಚಿತತೆ, ಅಶಾಂತಿ ಹೆಚ್ಚಾಗಿದೆ. ಅದರ ಪರಿಣಾಮ ಅಲ್ಲಿನ ಗಾರ್ಮೆಂಟ್ಸ್ ಉದ್ಯಮದ ಮೇಲೆಯೂ ತಟ್ಟಿದೆ. ಆದರೆ, ಇದರಿಂದ ಕರ್ನಾಟಕಕ್ಕೆ ಲಾಭವಾಗಬಹುದು. ಆ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ ಕರ್ನಾಟಕ ಜವಳಿ ಸಚಿವ ಶಿವಾನಂದ್ ಪಾಟೀಲ್.

ಬಾಂಗ್ಲಾದೇಶ ಅರಾಜಕತೆಯಿಂದ ಕರ್ನಾಟಕದ ಗಾರ್ಮೆಂಟ್ಸ್ ಕ್ಷೇತ್ರಕ್ಕೆ ಪ್ರಯೋಜನ!
ಕೈಮಗ್ಗ (ಸಾಂದರ್ಭಿಕ ಚಿತ್ರ)
Image Credit source: PTI
Follow us on

ಬೆಂಗಳೂರು, ಆಗಸ್ಟ್ 8: ಬಾಂಗ್ಲಾದೇಶದ ರಾಜಕೀಯ ಅನಿಶ್ಚಿತತೆ, ಅಶಾಂತಿಯು ಭಾರತದ ಗಾರ್ಮೆಂಟ್ಸ್ ಕ್ಷೇತ್ರಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಪ್ರಯೋಜನವನ್ನು ಉಂಟುಮಾಡಲಿದೆ. ಈ ಪರಿಸ್ಥಿತಿಯ ಪ್ರಯೋಜನ ಪಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕರ್ನಾಟಕ ಜವಳಿ ಸಚಿವ ಶಿವಾನಂದ್ ಪಾಟೀಲ್ ಬುಧವಾರ ಹೇಳಿದ್ದಾರೆ. ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ಬೆಳವಣಿಗೆಗಳು ಅಲ್ಲಿನ ಗಾರ್ಮೆಂಟ್ಸ್ ಉದ್ಯಮಕ್ಕೆ ಅಡ್ಡಿಯಾಗುವುದು ಖಚಿತ. ಇದು ನಮಗೆ ಉತ್ತಮ ಅವಕಾಶವಾಗಿದ್ದು, ರಾಜ್ಯವು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಕೈಮಗ್ಗ ಕ್ಷೇತ್ರದಲ್ಲಿ ಆದಾಯದ ಮಟ್ಟ ಕುಸಿಯುತ್ತಿರುವುದರಿಂದ ಅನೇಕ ನೇಕಾರರು ತಮ್ಮ ವೃತ್ತಿಯನ್ನು ತ್ಯಜಿಸುತ್ತಿದ್ದಾರೆ ಎಂದಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಲ್ಯಾಣ ಯೋಜನೆಗಳನ್ನು ಹೊರತರುತ್ತಿದ್ದರೂ ಸಮುದಾಯವು ವೃತ್ತಿಯನ್ನು ಸಂಪೂರ್ಣವಾಗಿ ದೂರವಿಡುತ್ತಿದೆ. ಕೈಮಗ್ಗಕ್ಕೆ ಬದಲಾಗಿ ತಮ್ಮದೇ ಆದ ಸಣ್ಣ ಜವಳಿ ಘಟಕಗಳನ್ನು ಸ್ಥಾಪಿಸಲು ಸರ್ಕಾರಗಳು ನೇಕಾರರಿಗೆ ಸಹಾಯ ಮಾಡುತ್ತಿವೆ. ಜೊತೆಗೆ ವಿದ್ಯುತ್‌ಗೆ ಹೆಚ್ಚಿನ ಸಹಾಯಧನ, ಕಡಿಮೆ ಬಡ್ಡಿದರದಲ್ಲಿ ಸಾಲ ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಕೈಮಗ್ಗ ನಿಗಮವು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2017 ಮತ್ತು 2020 ರ ನಡುವೆ ಸಾವನ್ನಪ್ಪಿದ 123 ನೇಕಾರರ 114 ನಾಮನಿರ್ದೇಶಿತರಿಗೆ ವಿಮಾ ಮೊತ್ತವನ್ನು ಎಲ್ಐಸಿ ಇನ್ನೂ ಬಿಡುಗಡೆ ಮಾಡಿಲ್ಲ.

ಎಲ್ಲಾ 123 ನೇಕಾರರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಆಮ್ ಆದ್ಮಿ ಬಿಮಾ ಯೋಜನೆ ಗ್ರೂಪ್ ಇನ್ಶೂರೆನ್ಸ್​​ ಯೋಜನೆಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು.

ಇದನ್ನೂ ಓದಿ: ಜನರ ಕೈಗೇ ಇನ್ಮುಂದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್; ಸಾರ್ವಜನಿಕರೇ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಬಹುದು!

ಕಳೆದ ನಾಲ್ಕು ವರ್ಷಗಳಲ್ಲಿ (2020-24) ರಾಜ್ಯದಲ್ಲಿ 42 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ಉಲ್ಲೇಖಿಸಿವೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ (ಕೋವಿಡ್) ಮೃತ 25 ನೇಕಾರರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗಿದೆ. ಮೃತರಲ್ಲಿ ಏಳು ಮಂದಿಯ ಕುಟುಂಬದಿಂದ ಪರಿಹಾರಕ್ಕಾಗಿ ಸಲ್ಲಿಕೆಯಾದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಮತ್ತು 10 ನೇಕಾರರ ಕುಟುಂಬಗಳಿಗೆ ಇನ್ನೂ ಪರಿಹಾರವನ್ನು ನೀಡಲಾಗಿಲ್ಲ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:08 am, Thu, 8 August 24