ಉಡುಪಿ, ಏಪ್ರಿಲ್ 15: ಉಡುಪಿ ಬುದ್ದಿವಂತರ ಮತ್ತು ಮುಂದುವರಿದ ಜಿಲ್ಲೆ ಎನ್ನುವ ಮಾತಿದೆ. ಆದರೆ ಗ್ರಾಮೀಣ ಭಾಗದ ನೈಜ ಸತ್ಯವೇ ಬೇರೆ. ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳು ಮೂಲಭೂತ ಅಭಿವೃದ್ಧಿಯನ್ನೇ ಕಂಡಿಲ್ಲ. ಅದರಲ್ಲೂ ನಕ್ಸಲ್ (Naxal) ಪೀಡಿತ ಗ್ರಾಮಗಳೆಂಬ ಹಣೆಪಟ್ಟಿ ಅಭಿವೃದ್ಧಿಗೆ ಮಾರಕವಾಗಿರುವುದರಿಂದ ಚುನಾವಣೆ ಸಮಯದಲ್ಲಿ ಸಾಕಷ್ಟು ಆಕ್ರೋಶ ಕೇಳಿಬರುತ್ತಿವೆ. ಜಿಲ್ಲೆಯ ಕಾರ್ಕಳ, ಕುಂದಾಪುರ, ಬೈಂದೂರು ತಾಲೂಕಿನ ಹಲವು ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಜಡ್ಕಲ್, ಮೂದುರು, ಆಲೂರು, ನಾಡ ಅಮಾವಾಸ್ಯೆ ಬೈಲ್ ಹೀಗೆ ನಾನಾ ಗ್ರಾಮಗಳು ಇನ್ನೂ ಕೂಡ ಅಭಿವೃದ್ಧಿಯನ್ನೇ ಕಂಡಿಲ್ಲ. ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಸಂಚಾರಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇದರಿಂದ ಗ್ರಾಮೀಣ ಭಾಗದ ಜನ ಶಿಕ್ಷಣ ಉದ್ಯೋಗಕ್ಕಾಗಿ ನಿತ್ಯ ಪರದಾಡುವಂತಾಗಿದೆ. ನಕ್ಸಲ್ ಪೀಡಿತ ಗ್ರಾಮಗಳೆಂಬ ಹಣೆಪಟ್ಟಿಯನ್ನು ಕಟ್ಟಿರುವುದರಿಂದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ದಿ ಕುರಿತ ಪ್ಯಾಕೇಜ್ ಘೋಷಣೆ ಆಗಿಲ್ಲ. ಕಳೆದ ಒಂದು ದಶಕಗಳಿಂದ ನಕ್ಸಲ್ ಚಟುವಟಿಕೆ ಇಲ್ಲವಾದರೂ ಕೂಡ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯಿಂದ ಪ್ರವಾಸೋದ್ಯಮವೂ ಕುಂಠಿತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸುಂದರ ಪ್ರಕೃತಿಯ ತಾಣಗಳು ಇದ್ದರು ಕೂಡ ನಕ್ಸಲ್ ಭೀತಿಯಿಂದ ಯಾರೂ ಬರುತ್ತಿಲ್ಲ.
ಇದನ್ನೂ ಓದಿ: ಬೇಸಿಗೆ ರಜೆಯಲ್ಲಿ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನಕ್ಕೆ ಭೇಟಿ ನೀಡಿ, ಹೋಗುವುದು ಹೇಗೆ?
ಜಿಲ್ಲೆಯ ನಗರ ಪ್ರದೇಶ ಸಾಕಷ್ಟು ಅಭಿವೃದ್ಧಿ ಹಾದಿಯಲ್ಲಿ ಇದೆ. ಆದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಾಣದೆ ಸೋತು ಹೋಗಿದೆ. ಸೇತುವೆ ನಿರ್ಮಾಣ ಮಾಡುವ ಕಡೆಗೆ, ಗ್ರಾಮೀಣ ಪ್ರದೇಶ ದಾರಿ ದೀಪ, ಶಾಲಾ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಜನ ನಿತ್ಯ ಸಂಕಷ್ಟ ಜೊತೆಗೆ ಜೀವನ ಸಾಗಿಸುವಂತಾಗಿದೆ. ಲೋಕಸಭಾ ಚುನಾವಣೆ ಕೂಡ ಬಂತು ಇನ್ನಾದರೂ ನಕ್ಸಲ್ ಹಣೆಪಟ್ಟಿ ತೊಡೆದು ಹಾಕುವ ಕಡೆಗೆ ಸರ್ಕಾರ, ಜಿಲ್ಲಾಡಳಿತ ಗಮನಹರಿಸಬೇಕು. ಗ್ರಾಮಗಳ ಅಭಿವೃದ್ಧಿ ಸೂಕ್ತ ಯೋಜನೆಯನ್ನು ಜಾರಿಗೆ ತಂದು ಹಳ್ಳಿಗಳ ಉದ್ದಾರ ಮಾಡಬೇಕು ಎಂಬುದು ಗ್ರಾಮೀಣ ಭಾಗದ ಜನರ ಆಗ್ರಹವಾಗಿದೆ.
ಇದನ್ನೂ ಓದಿ: ನೀರಿನ ಸಮಸ್ಯೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಇಲ್ಲಿದೆ ದರ ವಿವರ
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ತಾಲೂಕಿನ ಹಲವು ಗ್ರಾಮಗಳು ಇನ್ನೂ ಕೂಡ ಕುಗ್ರಾಮಗಳಾಗಿ ಉಳಿದಿದೆ. ಚುನಾವಣೆ ಬಹಿಷ್ಕರ ಬಿಸಿ ತಾಗುವ ಮೊದಲೇ ಸರ್ಕಾರ ಇಂತಹ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ದಿ ಮಾಡಬೇಕಿದೆ. ಈ ಮೂಲಕ ಜನರ ಜೀವನ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾಣ್ಬೋದು ಅನ್ನೋದು ಎಲ್ಲರ ಒತ್ತಾಸೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:39 pm, Mon, 15 April 24