ಇಬ್ಬರಲ್ಲಿ ಯಾರು ಶ್ರೀಮಂತರು? ಬೆಳಗಾವಿ ಕ್ಷೇತ್ರದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ
ಬೆಳಗಾವಿ ಲೋಕಸಭೆ ಚುನಾವಣೆ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭರ್ಜರಿ ಪೈಪೋಟಿ ಉಂಟಾಗಲಿದೆ. ಈಗಾಗಲೇ ಎರಡು ಪಕ್ಷಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿವೆ. ಇದರ ಮಧ್ಯೆ ಇಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗಾವಿ, ಏಪ್ರಿಲ್ 15: ಬೆಳಗಾವಿ ಲೋಕಸಭೆ ಚುನಾವಣೆ ಕಣದಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ ನಡುವೆ ಭರ್ಜರಿ ಪೈಪೋಟಿ ಉಂಟಾಗಲಿದೆ. ಈಗಾಗಲೇ ಎರಡು ಪಕ್ಷಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿವೆ. ಇದರ ಮಧ್ಯೆ ಇಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, 12.45 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಅದೇ ರೀತಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಕೂಡ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಒಟ್ಟು 13.63 ಕೋಟಿ ರೂ. ಮೌಲ್ಯ ಆಸ್ತಿಯನ್ನು ಅಫಿಡವಿಟ್ನಲ್ಲಿ ಘೋಷಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆಸ್ತಿ ವಿವರ
- ಒಟ್ಟು ಆಸ್ತಿ ಮೌಲ್ಯ 12.45 ಕೋಟಿ ರೂ.
- ಶೆಟ್ಟರ್ ಚರಾಸ್ತಿ 2.63 ಕೋಟಿ ರೂ., ಸ್ಥಿರಾಸ್ತಿ 9.82 ಕೋಟಿ ರೂ.
- ಶೆಟ್ಟರ್ ಬಳಿ 15.37 ಲಕ್ಷ ರೂ. ನಗದು ಇದೆ. 57.26 ಲಕ್ಷ ರೂ. ಸಾಲವಿದೆ.
- 43.94 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದ್ದು, ಸ್ವಂತ ವಾಹನ ಇಲ್ಲ.
- ಶೆಟ್ಟರ್ ಪತ್ನಿ ಶಿಲ್ಪಾ ಚರಾಸ್ತಿ 91.1 ಲಕ್ಷ ರೂ., ಸ್ಥಿರಾಸ್ತಿ 1 ಲಕ್ಷ ರೂ.
- ಶಿಲ್ಪಾ ಬಳಿ 1.1 ಕೆಜಿ ಚಿನ್ನ, 3 ಕೆಜಿ ಬೆಳ್ಳಿ.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಆಸ್ತಿ ವಿವರ
- ಮೃಣಾಲ್ ಹೆಬ್ಬಾಳ್ಕರ್ ಒಟ್ಟು ಆಸ್ತಿ ಮೌಲ್ಯ 13.63 ಕೋಟಿ ರೂ.
- ಚರಾಸ್ತಿ 10.1 ಕೋಟಿ ರೂ., ಸ್ಥಿರಾಸ್ತಿ 3.62 ಕೋಟಿ ರೂ.
- ಕೋಟ್ಯಧಿಪತಿ ಆದ್ರೂ ಮೃಣಾಲ್ ಒಂದೇ ಒಂದು ವಾಹನ ಹೊಂದಿಲ್ಲ.
- ಮೃಣಾಲ್ ಬಳಿ 3.78 ಲಕ್ಷ ರೂ. ಮೌಲ್ಯದ 150 ಗ್ರಾಂ ಚಿನ್ನಾಭರಣವಿದೆ.
- ಮೃಣಾಲ್ ಬಳಿ 4.2 ಕೋಟಿ ರೂ. ಮೌಲ್ಯದ ವಿವಿಧ ಷೇರುಗಳಿವೆ.
- ಸಾಲ 6.16 ಕೋಟಿ ರೂ.
- ಮೃಣಾಲ್ ಪತ್ನಿ ಹಿತಾ ಒಟ್ಟು ಆಸ್ತಿ ಮೌಲ್ಯ 23.55 ಲಕ್ಷ ರೂ. ಹೊಂದಿದ್ದಾರೆ.
- ಪತ್ನಿ ಹಿತಾ ಚರಾಸ್ತಿ ಮೌಲ್ಯ 23.55 ಲಕ್ಷ ರೂ., ಸ್ಥಿರಾಸ್ತಿ ಇಲ್ಲ.
- ಹಿತಾ ಬಳಿ 12.5 ಲಕ್ಷ ರೂ. ಮೌಲ್ಯದ ಚಿನ್ನ ಇದೆ.
- ಮೃಣಾಲ್ ತಾಯಿ ಸಚಿವೆಯಾದ್ರೂ ತಂದೆ-ತಾಯಿ ಆಸ್ತಿ ವಿವರ ಉಲ್ಲೇಖಿಸಿಲ್ಲ.
ಇದನ್ನೂ ಓದಿ: ಬೆಳಗಾವಿಯಲ್ಲೊಂದು ಮನೆ ಮಾಡಿ, ಯುಗಾದಿಯಂದು ಗೃಹ ಪ್ರವೇಶಿಸಿದ ಜಗದೀಶ್ ಶೆಟ್ಟರ್ ಹೇಳಿದ್ದಿಷ್ಟು
ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಕಾಂಗ್ರೆಸ್ ನಾಯಕರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೋದಲ್ಲೆಲ್ಲಾ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬೆಳಗಾವಿ ನೆಲದಲ್ಲಿ ನಿಂತುಕೊಂಡು ಜಗದೀಶ್ ಶೆಟ್ಟರ್ ಹುಬ್ಬಳ್ಳಿ ನನ್ನ ಜನ್ಮ ಭೂಮಿ, ಇನ್ನ ಮುಂದೆ ಬೆಳಗಾವಿಯೇ ನನ್ನ ಕರ್ಮ ಭೂಮಿ ಅಂತಾ ಹೇಳಿದ್ದರು. ಈ ಮೂಲಕ ಸ್ಥಳೀಯ ಬಿಜೆಪಿ ನಾಯಕರು ಮತ್ತು ವಿಪಕ್ಷದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದರು.
ಇದನ್ನೂ ಓದಿ: ಮಾತಿನಂತೆ ನಡೆದು ಬೆಳಗಾವಿಯಲ್ಲಿ ಮನೆ ಮಾಡಿ ಕುಟುಂಬದೊಂದಿಗೆ ಗೃಹಪ್ರವೇಶ ಮಾಡಿದ ಜಗದೀಶ್ ಶೆಟ್ಟರ್
ಆದರೆ ಯಾವಾಗ ಜಗದೀಶ್ ಶೆಟ್ಟರ್ ಬೆಳಗಾವಿ ಕರ್ಮ ಭೂಮಿ ಅಂದ್ರೋ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಟು ಶಬ್ಧಗಳಿಂದ ಹೋದಲ್ಲೆಲ್ಲಾ ವಾಗ್ದಾಳಿ ಮಾಡಿದ್ದಾರೆ. ಪಂಚಮಸಾಲಿ ಮೀಸಲಾತಿಗೆ ಸಂಪುಟದಲ್ಲಿ ವಿರೋಧಿಸಿದ್ದರು. ಹುಬ್ಬಳ್ಳಿಯಲ್ಲಿ 6 ಬಾರಿ ಗೆದ್ದವರನ್ನ ಅಲ್ಲಿನ ಜನ ಹೊರ ಹಾಕಿದ್ದಾರೆ. ಈಗ ಬೆಳಗಾವಿಗೆ ಬಂದು ನನ್ನ ಕರ್ಮ ಭೂಮಿ ಎನ್ನುತ್ತಿದ್ದಾರೆ. ಶೆಟ್ಟರ್ ಅವರು ಮೊದಲು ತಮ್ಮ ಅಡ್ರೆಸ್ ಎಲ್ಲಿ ಅಂತಾ ಹೇಳಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಶೆಟ್ಟರ್ಗೆ ತೀರುಗೇಟು ಕೊಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.