ಮಣಿಪಾಲದಲ್ಲಿ ವೈದ್ಯಕೀಯ ಪರಿಕರ ಹೊತ್ತು ಬಂದ ಡ್ರೋನ್! ವಿಡಿಯೋ ನೋಡಿ

ಮಣಿಪಾಲದಲ್ಲಿ ವೈದ್ಯಕೀಯ ಪರಿಕರ ಹೊತ್ತು ಬಂದ ಡ್ರೋನ್! ವಿಡಿಯೋ ನೋಡಿ

ಪ್ರಜ್ವಲ್ ಅಮೀನ್​, ಉಡುಪಿ
| Updated By: Ganapathi Sharma

Updated on: Apr 11, 2024 | 2:10 PM

ಗ್ರಾಮೀಣ ಭಾಗದ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಿಗೆ ಭವಿಷ್ಯದಲ್ಲಿ ಈ ಸೇವೆಯಿಂದ ಉಪಯೋಗವಾಗಲಿದೆ. ಗ್ರಾಮೀಣ ಭಾಗದ ಸಾರಿಗೆ ಕೊರತೆಯನ್ನು ತಪ್ಪಿಸಲು ಬಹುಪಯೋಗಿ ಡ್ರೋನ್ ಬಳಕೆಯಾಗಲಿದೆ. ಜತೆಗೆ, ಗ್ರಾಮೀಣ ಆಸ್ಪತ್ರೆ ಮತ್ತು ಪ್ರಯೋಗಾಲಯದ ನಡುವೆ ಸಂಪರ್ಕ ಬೆಸೆಯಲೂ ಸಾಧ್ಯವಿದೆ.

ಉಡುಪಿ, ಏಪ್ರಿಲ್ 11: ವೈದ್ಯಕೀಯ ಸೇವೆಗೆ ಇದೀಗ ಅತ್ಯಾಧುನಿಕ ಡ್ರೋನ್ (Drone) ಪ್ರವೇಶವಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ (KMC Hospital) ಪ್ರಾಯೋಗಿಕವಾಗಿ ಡ್ರೋನ್ ಮೂಲಕ ವೈದ್ಯಕೀಯ ಪರಿಕರ ರವಾನಿಸಲಾಯಿತು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾರ್ಕಳದ ಟಿಎಂಎ ಪೈ ರೋಟರಿ ಆಸ್ಪತ್ರೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹಾರಿದ ಡ್ರೋನ್ ವೈದ್ಯಕೀಯ ಪರಿಕರಗಳನ್ನು ಹೊತ್ತೊಯ್ದಿತು.

ರಸ್ತೆ ಮಾರ್ಗದಲ್ಲಿ ವೈದ್ಯಕೀಯ ಪರಿಕರಗಳ ರವಾನೆಗೆ ಕನಿಷ್ಠ 1 ಗಂಟೆ ತಗಲುತ್ತದೆ. ಡ್ರೋನ್ ಮೂಲಕ ಕೇವಲ 25 ನಿಮಿಷದಲ್ಲಿ ವೈದ್ಯಕೀಯ ಪರಿಕರಗಳ ರವಾನೆ ಮಾಡಬಹುದಾಗಿದೆ. ಭವಿಷ್ಯದ ತುರ್ತು ಅಗತ್ಯಗಳಿಗೆ ಈಗಲೇ ಸಿದ್ಧತೆ ನಡೆಸುವ ಸಲುವಾಗಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಇದೇ ವೇಳೆ, ಕರ್ನಾಟಕದ ಫಿರಿಫೆರಲ್ ಮತ್ತು ಟರ್ಷಿಯರಿ ಕೇರ್ ಆಸ್ಪತ್ರೆಗಳ ನಡುವೆ ಸ್ಯಾಂಪಲ್ ಸಾಗಿಸಲು ಡ್ರೋನ್ ಬಳಕೆ ಮಾಡುವ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಯಿತು. ಡ್ರೋನ್ ಮೂಲಕ ಸುಧಾರಿತ ಕ್ಷಿಪ್ರ ಗತಿಯ ಆರೋಗ್ಯ ಸೇವೆ ನೀಡುವ ಉದ್ದೇಶದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಿಗೆ ಭವಿಷ್ಯದಲ್ಲಿ ಈ ಸೇವೆಯಿಂದ ಉಪಯೋಗವಾಗಲಿದೆ. ಗ್ರಾಮೀಣ ಭಾಗದ ಸಾರಿಗೆ ಕೊರತೆಯನ್ನು ತಪ್ಪಿಸಲು ಬಹುಪಯೋಗಿ ಡ್ರೋನ್ ಬಳಕೆಯಾಗಲಿದೆ. ಜತೆಗೆ, ಗ್ರಾಮೀಣ ಆಸ್ಪತ್ರೆ ಮತ್ತು ಪ್ರಯೋಗಾಲಯದ ನಡುವೆ ಸಂಪರ್ಕ ಬೆಸೆಯಲೂ ಸಾಧ್ಯವಿದೆ. ಇದರಿಂದ ಭವಿಷ್ಯದಲ್ಲಿ ಸುಧಾರಿತ ಆರೋಗ್ಯ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿ ಸಾಧ್ಯತೆ ಇದೆ ಎಂದು ಕೆಎಂಸಿ ಹೇಳಿದೆ.

ಇದನ್ನೂ ಓದಿ: ಬೇಸಿಗೆ ರಜೆಯಲ್ಲಿ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನಕ್ಕೆ ಭೇಟಿ ನೀಡಿ, ಹೋಗುವುದು ಹೇಗೆ?

ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ ಡಾ. ರಾಜೀವ್ ಬಹ್ಲ್ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ