ಬೆಂಗಳೂರು: 117 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶಪಡಿಸಿದ ಎನ್‌ಸಿಬಿ
ಮಾದಕ ವಸ್ತು ನಿಯಂತ್ರಣ ಬ್ಯೂರೋದ (NCB) ಬೆಂಗಳೂರು ವಲಯದ ಅಧಿಕಾರಿಗಳು ದಾಬಸ್‌ಪೇಟೆಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬರೋಬ್ಬರಿ 117 ಕೋಟಿ ರೂಪಾಯಿ ಮೌಲ್ಯದ 59.8 ಕೆಜಿ ಹೆರಾಯಿನ್ ಅನ್ನು ಸುಟ್ಟು ನಾಶಪಡಿಸಿದ್ದಾರೆ. ಇದೇ ವೇಳೆ, ಮಾದಕ ವಸ್ತುಗಳ ಕಳ್ಳಸಾಗಣೆ ಕುರಿತು ಮಾಹಿತಿ ಹೊಂದಿರುವ ನಾಗರಿಕರು 1933 ಸಹಾಯವಾಣಿಗೆ ಮಾಹಿತಿ ನೀಡುವಂತೆ ಎನ್‌ಸಿಬಿ ಮನವಿ ಮಾಡಿದೆ.
ಬೆಂಗಳೂರು, ನವೆಂಬರ್ 28: ಮಾದಕ ವಸ್ತು ನಿಯಂತ್ರಣ ಬ್ಯೂರೋದ (NCB) ಬೆಂಗಳೂರು ವಲಯದ ಅಧಿಕಾರಿಗಳು ಶುಕ್ರವಾರ ಸುಮಾರು 117 ಕೋಟಿ ರೂಪಾಯಿ ಮೌಲ್ಯದ 59.8 ಕೆಜಿ ಹೆರಾಯಿನ್ ನಾಶಪಡಿಸಿದ್ದಾರೆ. ಇದರೊಂದಿಗೆ ಈ ವರ್ಷ ಬೆಂಗಳೂರು ವಲಯದಲ್ಲಿ ವಿಲೇವಾರಿ ಮಾಡಲಾದ ಒಟ್ಟು ಮಾದಕ ವಸ್ತುಗಳ ಪ್ರಮಾಣ 2,086 ಕೆಜಿಗೆ ತಲುಪಿದೆ. ವಿಚಾರಣೆ ಪೂರ್ಣಗೊಂಡಿದ್ದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. ತುಮಕೂರು ರಸ್ತೆಯ ದಾಬಸ್‌ಪೇಟೆಯಲ್ಲಿರುವ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಘಟಕದಲ್ಲಿ ಮಾದಕ ವಸ್ತುಗಳನ್ನು ಸುಟ್ಟು ನಾಶಪಡಿಸಲಾಗಿದೆ.
ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳ ಕಾಯ್ದೆ (NDPS Act)ಯ ನಿಯಮಗಳ ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ. ಉನ್ನತ ಮಟ್ಟದ ಮಾದಕ ವಸ್ತು ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ನಾಶಪಡಿಸುವ ಪ್ರಕ್ರಿಯೆ ನಡೆದಿದೆ. ಮಾದಕ ವಸ್ತುಗಳು ಸಾರ್ವಜನಿಕರ ಕೈಗೆ ತಲುಪದಂತೆ ತಡೆಯುವುದು ಹಾಗೂ ಡ್ರಗ್ಸ್ ಕಳ್ಳಸಾಗಣೆ ನಿಯಂತ್ರಿಸುವ ನಿರಂತರ ಪ್ರಯತ್ನದ ಭಾಗವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ. ಇದೇ ವೇಳೆ, ಮಾದಕ ವಸ್ತುಗಳ ಕಳ್ಳಸಾಗಣೆ ಕುರಿತು ಮಾಹಿತಿ ಹೊಂದಿರುವ ನಾಗರಿಕರು 1933 ಸಹಾಯವಾಣಿಗೆ ಮಾಹಿತಿ ನೀಡುವಂತೆ ಎನ್‌ಸಿಬಿ ಮನವಿ ಮಾಡಿದೆ. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಹಾಗೂ ಅರ್ಹ ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
