ಹಾಸನ, ಏಪ್ರಿಲ್ 13: ತೆನೆಹೊತ್ತ ಮಹಿಳೆಗೆ ಕಮಲ ಎಂದು ಹೊಸದಾಗಿ ನಾಮಕರಣ ಮಾಡಿದ್ದೇವೆ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಹೇಳಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚಿಗನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕೆಲವರು ಚುನಾವಣೆಯಲ್ಲಿ ಚಿಹ್ನೆ ಯಾವುದಿರುತ್ತೆ ಅಂತಾ ಕೇಳುತ್ತಿದ್ದರು. ತೆನೆ ಹೊತ್ತ ಮಹಿಳೆ ಚಿಹ್ನೆ ಇರುತ್ತಾ, ಕಮಲ ಇರುತ್ತಾ ಅಂತಾ ಕೇಳುತ್ತಿದ್ದಾರೆ. ಅನುಮಾನ ಗೊಂದಲ ಬೇಡ, ತೆನೆಹೊತ್ತ ಮಹಿಳೆ ನಮ್ಮ ಚಿಹ್ನೆ, ಮಹಿಳೆ ಹೆಸರು ಕಮಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ. ಅಭಿವೃದ್ಧಿ ವಿಚಾರದಲ್ಲಿ ನಮಗೆ ಯಾರೂ ಸರಿಸಾಟಿಯೇ ಇಲ್ಲ. ಮಾತೆತ್ತಿದ್ದರೆ ಕಾಂಗ್ರೆಸ್ ನಾಯಕರು ರೇವಣ್ಣ ದುರಹಂಕಾರಿ ಅಂತಾರೆ. ರೇವಣ್ಣನವರಿಗೆ ಸ್ವಲ್ಪ ಸಿಟ್ಟು ಜಾಸ್ತಿ, ಆದರೆ ಹೃದಯದಲ್ಲಿ ಪ್ರೀತಿ ಇದೆ ಎಂದಿದ್ದಾರೆ.
ಆರ್‌ಎಸ್‌ಎಸ್ ಸ್ವಯಂ ಸೇವಕ ವಿಜಯಕುಮಾರ್ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿ ಅವರು, ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಮೀಲಾಗಿದ್ದಾರೆ. ವಿಜಯಕುಮಾರ್‌ಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ಪೊಲೀಸರು ಒತ್ತಡಕ್ಕೆ ಸಿಲುಕಿದ್ದಾರೆ. ಕೆಲವರು ರಾತ್ರೋರಾತ್ರಿ ಹಾಸನದಿಂದ ಪೊಲೀಸರಿಗೆ ಫೋನ್ ಮಾಡಿಸಿದ್ದಾರೆ. ಕಿಡಿಗೇಡಿಗಳ ಮೇಲೆ ಪೊಲೀಸರು ಕಠಿಣವಾದ ಕ್ರಮ ಜರುಗಿಸಬೇಕಿತ್ತು. ಆದರೆ ವಿಫಲರಾಗಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ರೌಡಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಡಿಕೆ ಸಹೋದರರ ದೌರ್ಜನ್ಯ ಕೊನೆಗಾಣಿಸಲು ಮಂಜುನಾಥ್ ಕಣಕ್ಕಿಳಿಸಿದ್ರು ಮೋದಿ: ಹೆಚ್ಡಿ ದೇವೇಗೌಡ
ವಿಜಿಯವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಸಬ್‌ಕಾನ್ಷಿಯಸ್ ಲೆವೆಲ್‌ನಲ್ಲಿ ಇರಲಿಲ್ಲ. ರಾತ್ರಿ ಸ್ವಲ್ಪ ಚೇತರಿಸಿಕೊಂಡ ಮೇಲೆ ಮತ್ತೆ ಹೇಳಿಕೆ ಕೊಟ್ಟಿದ್ದಾರೆ. ಮಾರಕಾಸ್ತ್ರ ಬಳಸಿ ಹಲ್ಲೆ ಮಾಡಿದ್ದಾರೆ, ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಅಂಗಡಿ ಧ್ವಂಸಗೊಳಿಸಿದ್ದಾರೆ. ಅವರಿಗಿನ್ನೂ ಮದುವೆಯಾಗಿಲ್ಲ. ಹಿಂದುತ್ವಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಮನೆಯಲ್ಲಿ ಏನು ಇಲ್ಲ, ಅವರ ಬಳಿ ಆಸ್ಪತ್ರೆಗೆ ಕಟ್ಟಲು ದುಡ್ಡಿಲ್ಲ.
ಬಹಳ ಒಳ್ಳೆಯ ವ್ಯಕ್ತಿತ್ವ, ಅಂತಹವರ ಮೇಲೆ ಹಲ್ಲೆ ಮಾಡಿರುವವರ ಮನಸ್ಥಿತಿ ಹೇಗಿರಬೇಕು ಎಂದಿದ್ದಾರೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳದೆ ಮಾತನಾಡಿದ್ದೇನೆ, ಕ್ಷಮಿಸಿ ಎಂದ ಪ್ರಜ್ವಲ್ ರೇವಣ್ಣ
ವಿಜಿಯವರ ಸಾವಾಗಿದ್ದರೆ ಅವರ ತಂದೆ-ತಾಯಿಯನ್ನು ಯಾರು ನೋಡಿಕೊಳ್ಳುತ್ತಿದ್ದರು. ಮಂತ್ರಿಗೆ ಫೋನ್ ಮಾಡಿ ಹಲ್ಲೆ ಮಾಡಿವವರನ್ನು ಬಿಡಿಸುತ್ತಾರೆ. ಇದರಲ್ಲಿ ಯಾರ್ಯಾರು ಇದ್ದಾರೆ ಅನ್ನುವುದು ತನಿಖೆಯಾಗಬೇಕು. ನ್ಯಾಯ ಕೊಡಿಸುವುದು ಪೊಲೀಸರ ಜವಾಬ್ದಾರಿ. ಜನಪರ ಕೆಲಸ ಮಾಡುವ ಖಾಕಿ ಯಾರೋ ಒಬ್ಬರ ಗುಲಾಮರಾಗಬಾರದು. ದಯವಿಟ್ಟು ಅವರಿಗೆ ನ್ಯಾಯ ಕೊಡಿಸಿ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.