ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

| Updated By: ವಿವೇಕ ಬಿರಾದಾರ

Updated on: Apr 22, 2024 | 2:52 PM

Neha Hiremath Murder Case: ಗುರುವಾರ (ಏ.18) ರಂದು ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಕೊಲೆಯಾಗಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಗೆ ನೀಡಿದೆ.

ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ನೇಹಾ ಹಿರೇಮಠ
Follow us on

ಶಿವಮೊಗ್ಗ, ಏಪ್ರಿಲ್​​ 22: ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (CID) ವಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಹೇಳಿದರು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೃತ ವಿದ್ಯಾರ್ಥಿನಿ ನೇಹಾ ಕೊಲೆಗೆ ಸೂಕ್ತ ನ್ಯಾಯ ದೊರಕಿಸಬೇಕು. ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಲು ಸರ್ಕಾರ ಸಿಐಡಿಗೆ ನೀಡಿದೆ. ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ನಮ್ಮ ಆಡಳಿತ ಅವಧಿಯಲ್ಲಿ ಕಡಿಮೆ ಅಪರಾಧ ಪ್ರಕರಣಗಳು ನಡೆದಿವೆ. ನಮ್ಮ ಆಡಳಿತ ಅವಧಿಯಲ್ಲಿ 1390 ಪ್ರಕರಣಗಳು ನಡೆದಿವೆ. ಬಿಜೆಪಿ ಆಡಳಿತದಲ್ಲಿ ಹೆಚ್ಚು ನಡೆದಿವೆ. ನಮ್ಮ ಆಡಳಿತದಲ್ಲಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದು ಹೇಳಿದರು.

ಒತ್ತಡಕ್ಕೆ ಮಣಿದು ಸಿಐಡಿಗೆ ಕೊಟ್ಟಿತಾ ಸರ್ಕಾರ

ಕೊಲೆಯಾದ ನೇಹಾ ಹಿರೇಮಠ ಲಿಂಗಾಯತ ಸಮಾಜಕ್ಕೆ  ಸೇರಿದವರು. ಕೊಲೆ ಬೆನ್ನಲ್ಲೇ  ಲಿಂಗಾಯತ ಸಮಾಜ ಸರ್ಕಾರದ ವಿರುದ್ಧ ಮುಗಿ ಬಿದ್ದಿತು. ಅಲ್ಲದೆ ವಿವಿಧ ಮಠಾದೀಶರು ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ನೇಹಾ ಹಿರೇಮಠ ಕೊಲೆಗೆ ನ್ಯಾಯ ಕೊಡಿಸಬೇಕು, ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಲಿಂಗಾಯತ ಸ್ವಾಮೀಜಿಗಳಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಸರ್ಕಾರಕ್ಕೆ ಇದು ತಲೆನೋವಾಗಿ ಪರಿಣಮಿಸಿತು. ಅಲ್ಲದೆ ರಾಜ್ಯದ ವಿವಿಧ ಸಮಾಜ, ಸಂಘಟನೆಗಳ ಒತ್ತಡ ಕೂಡ ಸರ್ಕಾರಕ್ಕೆ ತಲೆನೋವು ಹೆಚ್ಚುವಂತೆ ಮಾಡಿತು. ಈ ಎಲ್ಲ ಒತ್ತಡಕ್ಕೆ ಮಣಿದು ಸರ್ಕಾರ ಸಿಐಡಿ ತನಿಖೆ ನೀಡಿದೆ ಅಂತ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ನೇಹಾ ಹಿರೇಮಠ ಕೊಲೆ

ನೇಹಾ ಹಿರೇಮಠ ಎಂಬ ಎಂಸಿಎ ವಿದ್ಯಾರ್ಥಿನಿ ಗುರುವಾರ (ಏ.18) ರಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆ ಬರೆದು ಮನೆಗೆ ಹೋಗುವಾಗ ಫಯಾಜ್​ ಎಂಬುವನು ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಅವರನ್ನು 14 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದನು. ಆರೋಪಿ ಫಯಾಜ್​ ನೇಹಾ ಹಿರೇಮಠರನ್ನು ಕೊಲೆ ಮಾಡಿ ಪರಾರಿಯಾಗಿದ್ದನು. ಕೂಡಲೆ ಕಾಲೇಜು ಆವರಣದಲ್ಲಿದ್ದ ವಿದ್ಯಾರ್ಥಿಗಳು ನೇಹಾರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೊತ್ತಿಗಾಗಲೆ ನೇಹಾ ಹಿರೇಮಠ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಲವ್​ ಜಿಹಾದ್​ ಎಂದ ಬಿಜೆಪಿ, ಹಿಂದೂ ಪರ ಸಂಘಟನೆಗಳು

ವಿಚಾರ ತಿಳಿದು ಕಾರ್ಯಪ್ರವೃತ್ತರಾದ ವಿದ್ಯಾನಗರ ಪೊಲೀಸರು, ಆರೋಪಿ ಫಯಾಜ್​ನನ್ನು ಕೆಲವೆ ಗಂಟೆಗಳಲ್ಲಿ ಬಂಧಿಸಿದರು. ಇನ್ನು ನೇಹಾ ಹಿರೇಮಠ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್​ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಫಯಾಜ್​ ನೇಹಾ ಹಿರೇಮಠರನ್ನು ಕೊಲೆ ಮಾಡಿದ್ದಾನೆ. ಇದು ಲವ್​ ಜಿಹಾದ್​ ಅಂತ ಹಿಂದೂ ಸಂಘಟನೆಗಳು, ಬಿಜೆಪಿ ಮತ್ತು ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿವೆ.

ಕೆರಳಿಸಿದ ಸಿಎಂ, ಡಿಸಿಎಂ ಹೇಳಿಕೆ

ಈ ಮಧ್ಯೆ ನೇಹಾ ಹಿರೇಮಠ ಮತ್ತು ಫಯಾಜ್​ ಒಟ್ಟಿಗೆ ಇರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ “ಇದು ವೈಯಕ್ತಿಕ ಕಾರಣಕ್ಕೆ ಆದ ಕೊಲೆ” ಎಂದು ಹೇಳಿಕೆ ನೀಡಿದ್ದರು. ಈ ವಿಚಾರ ಇನ್ನಷ್ಟು ಕೆರಳುವಂತೆ ಮಾಡಿತು. ಪ್ರಕರಣ ತನಿಖೆಯಲ್ಲಿರುವಾಗಲೇ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ಹೇಳಿಕೆ ಖಂಡನೀಯ ಅಂತ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ,  ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಹರಿಹಾಯ್ದವು. ಇದರಿಂದ ಪ್ರಕರಣ ನಿಧಾನವಾಗಿ ರಾಜಕೀಯದತ್ತ ವಾಲಲು ಶುರುವಾಯಿತು.

ಇದನ್ನೂ ಓದಿ:  ನೇಹಾ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ: ಸ್ವಪಕ್ಷದ ಕಾರ್ಪೊರೇಟರ್​​ನಿಂದಲೇ ಆರೋಪ, ಸಿಬಿಐ ತನಿಖೆಗೆ ಆಗ್ರಹ

ನೇಹಾ ಹತ್ಯೆಯಲ್ಲಿ ರಾಜಕೀಯ

ನೇಹಾ ಹಿರೇಮಠ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದು ಒಂದಡೆಯಾದರೆ, ಮತ್ತೊಂದೆಡೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಸರಣಿ ಹತ್ಯೆಗಳು ಮತ್ತು ದೇಶದ್ರೋಹದ ಘೋಷಣೆಗಳು ಮೊಳಗುತ್ತಿವೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇದಕ್ಕೆ ಕಾಂಗ್ರೆಸ್​ ಬಿಜೆಪಿ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ ಅಂತ ವಾಗ್ದಾಳಿ ಮಾಡಿದೆ.

ನೇಹಾ ಮನೆಗೆ ನಾಯಕರ, ಸ್ವಾಮೀಜಿಗಳ ದೌಡು

ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪ ಪ್ರಮೋದ ಮುತಾಲಿಕ್​ ಭೇಟಿ ನೀಡಿದ್ದರು. ಈ ವೇಳೆ ನೇಹಾ ತಂದೆ ನಿರಂಜನ ಹಿರೇಮಠ ಅವರಿಗೆ ಸಾಂತ್ವನ ಹೇಳಿದರು. ಹಾಗೇ ಶಿರಹಟ್ಟಿಯ ಬಾಳೆಹೊಸೂರು ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿದ್ದರು. ನೇಹಾ ಕುಟಂಬಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಇನ್ನು ನೇಹಾ ಹಿರೇಮಠ ಕೊಲೆ ಖಂಡಿಸಿ ಇಂದು (ಏ.22) ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.

ನ್ಯಾಯಕ್ಕಾಗಿ ಚಲನಚಿತ್ರ ಮಂದಿಯ ಕೂಗು

ನೇಹಾ ಹಿರೇಮಠ ಅವರ ಕೊಲೆಯನ್ನು ಕನ್ನಡ ಚಲನಚಿತ್ರ ನಟರು ಕೂಡ ಖಂಡಿಸಿದ್ದಾರೆ. ನೇಹಾ ಹಿರೇಮಠ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಈ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕೆಂದು ಹಲವು ನಟರು ಟ್ವೀಟ್​ ಮಾಡಿದ್ದಾರೆ. ನಟ ದರ್ಶನ, ದೃವ ಸರ್ಜಾ, ಶಿವರಾಜಕುಮಾರ್ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ. ಇನ್ನು ಒಳ್ಳೆ ಹುಡುಗ ಪ್ರಥಮ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:40 pm, Mon, 22 April 24