ಬೆಂಗಳೂರು: ಇಂಗ್ಲೆಡ್ನಲ್ಲಿ ಕೊರೊನಾ ವೈರಾಣು ರೂಪ ಬದಲಿಸಿದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ರೂಪಾಂತರ ಕೊರೊನಾದಿಂದ ಸೋಂಕು ಹರಡುವ ಪ್ರಮಾಣ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ರಾಜ್ಯದಲ್ಲಿ ಕೊರೊನಾ ಪ್ರಕರಣ ನಿಧಾನವಾಗಿ ಇಳಿಮುಖ ಕಾಣುತ್ತಿದೆ.
ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ 1200-1400 ಪ್ರಕರಣ ಪತ್ತೆ ಆಗುತ್ತಿವೆ. ಈಗ ಈ ಪ್ರಮಾಣ ಒಂದು ಸಾವಿರಕ್ಕೆ ಇಳಿಕೆ ಆಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 1005 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,14,488 ಕ್ಕೇರಿದೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 5 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ನಿಟ್ಟುಸಿರು ಬಿಡುವಂತೆ ಆಗಿದೆ.
ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 12,044 ಜನರ ಸಾವನಪ್ಪಿದ್ದಾರೆ. ಸೋಂಕಿತರ ಪೈಕಿ 8,88,917 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 13,508 ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 208 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ರಾಜ್ಯದಲ್ಲಿ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿರುವುದು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಬೆಂಗಳೂರಿನಲ್ಲಿಂದು 578 ಹೊಸ ಕೊರೊನಾ ಕೇಸ್ ಪತ್ತೆ ಆಗಿದೆ. ಐದು ಜನರ ಪೈಕಿ ನಾಲ್ವರು ಬೆಂಗಳೂರಿನಲ್ಲೇ ಮೃತಪಟ್ಟಿದ್ದಾರೆ. ಬಾಗಲಕೋಟೆ, ಹಾವೇರಿಯಲ್ಲಿ ಅತಿ ಕಡಿಮೆ ಎಂದರೆ ತಲಾ 2 ಕೊರೊನಾ ಕೇಸ್ ಪತ್ತೆ ಆಗಿದೆ.
ಸರ್ಕಾರದ ಮಾರ್ಗಸೂಚಿ: ಇಂದಿನಿಂದ ನೈಟ್ ಕರ್ಫ್ಯೂ ಜಾರಿ: ಸಮಯದಲ್ಲೂ ಬದಲಾವಣೆ