AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ ಜರ್ಮಲಿ ರಾಜ ವಂಶಸ್ಥರು.. ಪ್ರಜಾಪ್ರಭುತ್ವದಲ್ಲಿ ದೊರೆಗಳ ಅದೃಷ್ಟ ಪರೀಕ್ಷೆ

ಅಂದು ಪಾಳೇಗಾರರಾಗಿ ಆಳ್ವಿಕೆ ನಡೆಸಿದ್ದ ಅದೇ ರಾಜ ವಂಶದ ಕುಡಿ ಇಂದು ಪ್ರಜಾಪ್ರಭುತ್ವದ ಮೂಲಕ ಜನಸೇವೆ ಮಾಡಲು ಹೊರಟಿರುವುದು ಗ್ರಾಮ ಪಂಚಾಯತಿ ಚುನಾವಣೆಗೆ ವಿಭಿನ್ನ ರಂಗು ತಂದಿದೆ. ಅಲ್ಲದೇ ಇಡೀ ತಾಲ್ಲೂಕಿನ ಗಮನ ಸೆಳೆದಿದೆ.

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ ಜರ್ಮಲಿ ರಾಜ ವಂಶಸ್ಥರು.. ಪ್ರಜಾಪ್ರಭುತ್ವದಲ್ಲಿ ದೊರೆಗಳ ಅದೃಷ್ಟ ಪರೀಕ್ಷೆ
ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿರುವ ಜರ್ಮಲಿ ರಾಜವಂಶಸ್ಥ ಇಮ್ಮಡಿ ಸಿದ್ದಪ್ಪನಾಯಕ
Skanda
| Updated By: ಪೃಥ್ವಿಶಂಕರ|

Updated on:Dec 26, 2020 | 7:11 AM

Share

ಬಳ್ಳಾರಿ: ಆ ಕುಟುಂಬಸ್ಥರು ಒಂದು ಕಾಲದಲ್ಲಿ 133 ಗ್ರಾಮಗಳಿಗೆ ಜಹಗೀರುದಾರರು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದವರು. ಜರ್ಮಲಿ ಪಾಳೇಗಾರರು ಎಂದೇ ಮನೆಮಾತಾಗಿದ್ದವರು. ಅಂದು ಆಳ್ವಿಕೆ ನಡೆಸಿದ್ದ ರಾಜರ ವಂಶಸ್ಥರು ಇಂದು ಪ್ರಜಾಪ್ರಭುತ್ವದ ಬುನಾದಿಯಾಗಿರುವ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಜರ್ಮಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಜರ್ಮಲಿ ಗ್ರಾಮದಲ್ಲಿ ರಾಜವಂಶಸ್ಥರೊಬ್ಬರು ಆಖಾಡಕ್ಕೆ ಇಳಿದಿದ್ದಾರೆ. ಪ್ರಭುತ್ವದ ಹಿನ್ನೆಲೆಯುಳ್ಳ ಕುಟುಂಬದ ಇಮ್ಮಡಿ ಸಿದ್ದಪ್ಪನಾಯಕ ಪ್ರಜಾಪ್ರಭುತ್ವದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಜರ್ಮಲಿ ಗ್ರಾಮದಲ್ಲಿ ಒಟ್ಟು 4 ಸ್ಥಾನಗಳಿದ್ದು ಎಸ್.ಟಿ, ಎಸ್.ಟಿ.ಮಹಿಳೆ, ಎಸ್.ಸಿ. ಹಾಗೂ ಸಾಮಾನ್ಯ ಮಹಿಳೆಗೆ ನಾಲ್ಕೂ ಸ್ಥಾನಗಳು ಮೀಸಲಾಗಿವೆ. ಈ ಪೈಕಿ ಎಸ್.ಟಿ. ಸ್ಥಾನಕ್ಕೆ ಜರ್ಮಲಿ ದೊರೆ ವಂಶಸ್ಥ ಇಮ್ಮಡಿ ಸಿದ್ದಪ್ಪನಾಯಕ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ಈ ದೊರೆಗಳ ವಿರುದ್ದ ಯಾರೂ ಸ್ಪರ್ಧೆ ಮಾಡದೆ ಅವಿರೋಧ ಆಯ್ಕೆ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅಂತಿಮವಾಗಿ ಅವಿರೋಧ ಆಯ್ಕೆಯಾಗದ ಕಾರಣ ಈಗ ಚುನಾವಣೆ ಏರ್ಪಟ್ಟಿದೆ.

ರಾಜವಂಶಸ್ಥರಿಗೆ ಈಗಲೂ ದೊರೆಗಳೆಂಬ ಗೌರವ ವಿಜಯನಗರ ಕಾಲದಲ್ಲಿ ಸಾಮಂತರಾಗಿದ್ದ ಜರ್ಮಲಿ ಪಾಳೇಗಾರರು 16ನೇ ಶತಮಾನದ ಅವಧಿಯಲ್ಲಿ ಆಳ್ವಿಕೆ ನಡೆಸಿದವರು. ರಾಜವೈಭವದಿಂದ ಮೆರೆದವರು. ಇಂದಿಗೂ ಅವರ ರಾಜವಂಶಸ್ಥರು ಜರ್ಮಲಿಯಲ್ಲಿ ಇದ್ದಾರೆ. ಆದರೆ, ಈಗ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ಮಾಡುತ್ತಿದ್ದಾರೆ. ಆದರೂ, ಸ್ಥಳೀಯರು ಮಾತ್ರ ಈ ಮನೆತನದವರನ್ನು ಈಗಲೂ ದೊರೆಗಳು ಎಂದೇ ಕರೆಯುತ್ತಾರೆ. ರಾಜರಿಗೆ ನೀಡಬೇಕಾದ ಗೌರವವನ್ನು ನೀಡುತ್ತಾರೆ.

ಅಂದು ಪಾಳೇಗಾರರಾಗಿ ಆಳ್ವಿಕೆ ನಡೆಸಿದ್ದ ಅದೇ ರಾಜ ವಂಶದ ಕುಡಿ ಇಂದು ಪ್ರಜಾಪ್ರಭುತ್ವದ ಮೂಲಕ ಜನಸೇವೆ ಮಾಡಲು ಹೊರಟಿರುವುದು ಗ್ರಾಮ ಪಂಚಾಯತಿ ಚುನಾವಣೆಗೆ ವಿಭಿನ್ನ ರಂಗು ತಂದಿದೆ. ಅಲ್ಲದೇ ಇಡೀ ತಾಲ್ಲೂಕಿನ ಗಮನ ಸೆಳೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜರ್ಮಲಿ ರಾಜವಂಶಸ್ಥ ಇಮ್ಮಡಿ ಸಿದ್ದಪ್ಪನಾಯಕ, ನಮ್ಮ ಪೂರ್ವಜರು ಈ ಭಾಗದಲ್ಲಿ ರಾಜರಾಗಿ ಆಳ್ವಿಕೆ ನಡೆಸಿದ್ದಾರೆ. ಈಗ ರಾಜಪ್ರಭುತ್ವದ ಬದಲು ಪ್ರಜಾಪ್ರಭುತ್ವ ಇದೆ. ಆದರೂ ಜನರು ನಮ್ಮನ್ನು ಒಳ್ಳೆಯ ರೀತಿಯಲ್ಲಿ ಕಾಣುತ್ತಾರೆ. ಹೀಗಾಗಿಯೇ ಸ್ಥಳೀಯ ಜನತೆಯ ಸಹಕಾರದ ಮೇಲೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ನಮ್ಮ ಪೂರ್ವಜರಂತೆ ಜನತೆಯ ಸೇವೆ ಮಾಡುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ರಾಜವಂಶಸ್ಥರು ಚುನಾವಣೆಗೆ ನಿಂತಿರುವುದು ಊರಿನವರಿಗೆ ಸಂತಸ ತಂದಿದೆ ಎನ್ನುತ್ತಾರೆ ಗ್ರಾಮದ ಯುವಕ ತಿಪ್ಪೇಸ್ವಾಮಿ. ನಮ್ಮೂರಿನಲ್ಲಿ ಜರ್ಮಲಿ ರಾಜವಂಶಸ್ಥರಿಗೆ ಈಗಲೂ ಗೌರವ ಇದೆ. ಹೀಗಾಗಿ ಈ ಬಾರಿ ಪಂಚಾಯತಿ ಚುನಾವಣೆಗೆ ಅವರು ಸ್ಪರ್ಧೆ ಮಾಡಿರುವುದು ನಮ್ಮೆಲ್ಲರಿಗೂ ಖುಷಿ ಮೂಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೃಷಿ ಕೆಲಸಗಳಿಗೆ ಅಡ್ಡಗಾಲಾದ ಗ್ರಾಪಂ ಚುನಾವಣೆ ! ಭತ್ತದನಾಡಲ್ಲಿ ಕೂಲಿ ಆಳುಗಳ ಕೊರತೆ..

Published On - 7:09 am, Sat, 26 December 20