ಕಬ್ಬನ್ ಪಾರ್ಕ್ ಒಳಾಂಗಣದಲ್ಲಿ ವಾಹನಗಳ ಓಡಾಟ ನಿಷೇಧಿಸಿ: 5 ತಿಂಗಳ ಮಗುವಿನಿಂದ ಹೈಕೋರ್ಟ್ಗೆ ಅರ್ಜಿ
ನಗರದ ಕಬ್ಬನ್ ಪಾರ್ಕ್ ಒಳಾಂಗಣದಲ್ಲಿ ವಾಹನಗಳ ಓಡಾಟ ನಿಷೇಧಿಸಬೇಕು ಎಂದು, 5 ತಿಂಗಳ ಮಗು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸು ಜಾರಿಗೊಳಿಸಿದೆ.
ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಒಳಾಂಗಣದಲ್ಲಿ ವಾಹನಗಳ ಓಡಾಟ ನಿಷೇಧಿಸಬೇಕು ಎಂದು 5 ತಿಂಗಳ ಮಗು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದನ್ನು ಕೋರ್ಟ್ ಪುರಸ್ಕರಿಸಿದ್ದು, ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ.
ಕಿಯಾನ್ ಮೇಧಿ ಕುಮಾರ್ ಹೆಸರಿನ 5 ತಿಂಗಳ ಶಿಶು, ತನ್ನ ತಂದೆಯ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾನೆ. ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನವನ್ನು ಉಲ್ಲೇಖಿಸಿರುವ ಅರ್ಜಿಯಲ್ಲಿ , ಲಾಕ್ಡೌನ್ ಜಾರಿಯಿದ್ದಾಗ ಕಬ್ಬನ್ ಪಾರ್ಕ್ನಲ್ಲಿ, ಕಾರ್ಬನ್ ಮೋನೋಕ್ಸೈಡ್ ಪ್ರಮಾಣ ಕಡಿಮೆಯಾಗಿತ್ತು ಎಂದು ಹೇಳಲಾಗಿದೆ.
ಕಬ್ಬನ್ ಪಾರ್ಕ್ ಒಳಭಾಗದಲ್ಲಿ ವಾಹನಗಳಿಗೆ ಪ್ರವೇಶ ನೀಡಿರುವುದು ನೇರವಾಗಿ ಮಗುವಿನ ಆರೋಗ್ಯದ ಮೇಲೆ, ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ. ಕಂದಾಯ ಇಲಾಖೆಯ ಜಂಟಿ ನಿರ್ದೇಶಕರು, ಪಾದಾಚಾರಿಗಳು ಹಾಗೂ ವಾಹನ ಸಂಚಾರಕ್ಕೆ ಅವಕಾಶ ನೀಡಿ ಪರಿಷ್ಕರಿಸಿ ಪ್ರಕಟಿಸಿರುವ ಆದೇಶವನ್ನೂ ಇದರೊಂದಿಗೆ ನೀಡಲಾಗಿದೆ. ತೋಟಗಾರಿಕಾ ಇಲಾಖೆಯ ಸುಪರ್ದಿಯಲ್ಲಿರುವ ಉದ್ಯಾನವನಗಳನ್ನು ತೆರೆಯುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಬೆನ್ನಲ್ಲೇ ಕಂದಾಯ ಇಲಾಖೆಯ ಜಂಟಿ ನಿರ್ದೇಶಕರು ಈ ಪ್ರಕಟಣೆ ಹೊರಡಿಸಿದ್ದರು.
ಈ ಬಗ್ಗೆ ಜಸ್ಟಿಸ್ ಬಿವಿ ನಾಗರತ್ನ ಮತ್ತು ನಟರಾಜ್ ರಂಗಸ್ವಾಮಿ ಅವರ ನ್ಯಾಯಪೀಠ ಕರ್ನಾಟಕ ಸರ್ಕಾರ, ಬೆಂಗಳೂರು ನಗರ ಟ್ರಾಫಿಕ್ ಪೊಲೀಸ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ನಗರ ಸಾರಿಗೆ ನಿರ್ದೇಶಕರಿಗೆ ನೋಟೀಸು ಜಾರಿಗೊಳಿಸಿದೆ.
Published On - 7:44 pm, Fri, 25 December 20