
Uttara Kannada: ಪಶ್ಚಿಮ ಘಟ್ಟದ ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರದಲ್ಲಿ ಹೊಸ ಪ್ರಭೇದದ ಏಡಿ ಪತ್ತೆಯಾಗಿದೆ. ಯಲ್ಲಾಪುರದ ಕೃಷಿಕ, ಪರಿಸರಾಸಕ್ತ ಗೋಪಾಲಕೃಷ್ಣ ಹೆಗಡೆ, ಅರಣ್ಯ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿ ಮತ್ತು ಇತರರು ಸೇರಿ ಸಿಹಿನೀರಿನ ವಿಶಿಷ್ಟ ಏಡಿಯ ಗುರುತು ಪತ್ತೆಹಚ್ಚಿದ್ದಾರೆ. ಇದರ ಜೊತೆ ಈ ಏಡಿಗೆ ಪುಟ್ಟ ಬಾಲಕಿಯ ಹೆಸರನ್ನು ಇಟ್ಟಿದ್ದಾರೆ. ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆಯ ಅಡಿಕೆ ತೋಟ ಒಂದರಲ್ಲಿ ಹೊಸ ಪ್ರಭೇದದ ಏಡಿ ಪಟ್ಟಿಯಾಗಿದ್ದು, ಇದೀಗ ಈ ಏಡಿಗೆ ಬಾಲಕಿಯ ಹೆಸರನ್ನು ನಾಮಕರಣ ಮಾಡಿರುವುದು ವಿಶೇಷ ಸಂಗತಿ.
ಈ ಹೊಸ ಪ್ರಭೇದದ ಏಡಿಯನ್ನು ಪತ್ತೆಹಚ್ಚಿದ್ದು ಗೋಪಾಲಕೃಷ್ಣ ಹೆಗಡೆ. ಇವರೇ ಈ ಏಡಿಗೆ “ವೇಲ ಬಾಂಧವ್ಯ” ಎಂದು ಹೆಸರಿಟ್ಟಿದ್ದಾರೆ. ವೇಲ ಎಂದರೆ ಈ ಏಡಿಯ ತಳಿಯ ಹೆಸರು. ಗೋಪಾಲಕೃಷ್ಣ ಹೆಗಡೆಯವರ 5 ನೇ ತರಗತಿಯಲ್ಲಿ ಓದುತ್ತಿರುವ ಮಗಳ ಹೆಸರು ಬಾಂಧವ್ಯ. ಹಾಗಾಗಿ ಈ ಎರಡೂ ಪದಗಳನ್ನು ಜೋಡಿಸಿ ‘ವೇಲ ಬಾಂಧವ್ಯ’ ಎಂದು ಹೆಸರನ್ನಿಟ್ಟಿದ್ದಾರೆ. ಇದರ ಜೊತೆಗೆ ಮಳೆಗಾಲದ ಆರಂಭದಲ್ಲಿ ಈ ಏಡಿ ಸಾಮಾನ್ಯವಾಗಿ ಎಲ್ಲರ ತೋಟ, ಮನೆಗಳಲ್ಲಿ ಕಾಣಸಿಗುತ್ತದೆ. ಈ ಸೂಚಕವಾಗಿ “ಬಾಂಧವ್ಯ” ಎಂಬ ಹೆಸರಿಡಲಾಗಿದೆ.
ಇದನ್ನೂ ಓದಿ: ಅಪರೂಪದ ಪಕ್ಷಿ ಪ್ರಭೇದ ಹಾರ್ನಬಿಲ್ ಹಕ್ಕಿಹಬ್ಬವನ್ನ ಜಿಲ್ಲೆಯ ದಾಂಡೇಲಿಯಲ್ಲಿ ಆಯೋಜಿಸಲಾಗಿದ್ದು, ಅದರ ಝಲಕ್ ಇಲ್ಲಿದೆ ನೋಡಿ
ಹೊಸ ಏಡಿ ಪ್ರಬೇಧದ ಬಗ್ಗೆ ಸುದ್ದಿ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡುವಾಗ ಗೋಪಾಕೃಷ್ಣ ಹೆಗಡೆ, “ಮಳೆಗಾಲ ಶುರುವಾದ 10-15 ದಿನಗಳ ಕಾಲ ಮಾತ್ರ ಈ ಏಡಿ ಕಂಡುಬರುತ್ತೆ, ನೆಲದಲ್ಲಿ ಚಿಕ್ಕ ರಂಧ್ರ ಮಾಡಿ ಅದರಲ್ಲಿ ವಾಸವಿರುವ ಏಡಿಯಿದು. ಜೊತೆಗೆ ಈ ಏಡಿಯನ್ನು ಸ್ಥಳೀಯ ಬುಡಕಟ್ಟು ಜನಾಂಗಗಳು ಆಹಾರವಾಗಿ ಬಳಸುತ್ತಾರೆ. ಈ ಏಡಿಗೆ ಸ್ಥಳೀಯರು “ಹೋಟೆಕುರ್ಲಿ” ಎಂದು ಕರೆಯುತ್ತಾರೆ” ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Published On - 6:43 pm, Tue, 14 February 23