ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬೆಂಗಳೂರು ಸಮೀಪದಲ್ಲಿರುವ ಪ್ರವಾಸಿ ತಾಣವಾದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ನಾಳೆ (ಡಿಸೆಂಬರ್ 31) ಸಂಜೆ 6ರಿಂದ ನಾಡಿದ್ದು (ಜನವರಿ 1) ಬೆಳಗ್ಗೆ 7ರವರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಆದೇಶ ಹೊರಡಿಸಿದ್ದಾರೆ. ಚಿಕ್ಕಬಳ್ಳಾಪುರದ ಬಳಿ ಇರುವ ನಂದಿ ಗಿರಿಧಾಮ ಬಂದ್ ಆಗಲಿದೆ. ಹಾಗೇ, ನಂದಿಬೆಟ್ಟದ ಮೇಲಿನ ಗೆಸ್ಟ್ಹೌಸ್ ಬುಕ್ಕಿಂಗ್ ಅನ್ನು ಸಹ ರದ್ದುಗೊಳಿಸಲಾಗಿದೆ.
ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ನ್ಯೂಇಯರ್ ಸೆಲೆಬ್ರೇಷನ್‌ಗೆ ನಿರ್ಬಂಧ ಹೇರಲಾಗಿದೆ. ನಂದಿ ಬೆಟ್ಟದ ಸುತ್ತ 150ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸುತ್ತೇವೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರ ನಿಷೇಧ ಹೇರಿದೆ. ಹೊಸ ವರ್ಷದಂದು ರಾತ್ರಿ ಸಮಯದಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸಿದೆ. ಪೊಲೀಸ್ ಇಲಾಖೆಯಿಂದ ಹೋಟೆಲ್ ರೆಸಾರ್ಟ್ ಮಾಲೀಕರ ಜೊತೆ ಸಭೆ ಮಾಡಲಾಗಿದೆ. ಹೋಂ ಸ್ಟೇ ರೆಸಾರ್ಟ್ಗಳಲ್ಲಿ ನಿಗದಿತ ಜನ ಮಾತ್ರ ಇರಬೇಕು. ಹೆಚ್ಚು ಜನ ಸೇರಿಕೊಂಡು ಪಾರ್ಟಿ ಮಾಡುವಂತಿಲ್ಲ, ಡಿಜೆ ಬ್ಯಾನ್ ಮಾಡಲಾಗಿದೆ. ಧ್ವನಿವರ್ಧಕಗಳನ್ನು 10 ಗಂಟೆಯವರೆಗೂ ಮಾತ್ರ ಬಳಸಬೇಕು. ಬೈಕ್ ವ್ಹಿಲಿಂಗ್ ಹಾಗೂ ರ್ಯಾಷ್ ಡ್ರೈವಿಂಗ್ ಮಾಡುವವರ ಮೇಲೂ ಹದ್ದಿನ ಕಣ್ಣು ಇಡಲಾಗುವುದು. ಹೊಸ ವರ್ಷದಂದು ಟ್ರಾಫಿಕ್ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ನಾಳೆ ಮುರುಡೇಶ್ವರ ಕಡಲ ತೀರ ಓಪನ್
ಬೆಂಗಳೂರಲ್ಲಿ ಯಾವೆಲ್ಲ ನಿರ್ಬಂಧ?:
ಈ ಬಾರಿ ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸೋ ನಿರೀಕ್ಷೆ ಇದೆ. ಕಾವೇರಿ ನದಿ ತೀರ, ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ನಾಳೆ ರಾತ್ರಿ 1 ಗಂಟೆವರೆಗೂ ಪಬ್, ಬಾರ್ ಓಪನ್‌ಗೆ ಅವಕಾಶ ನೀಡಲಾಗಿದೆ.
ಮಂಡ್ಯದಲ್ಲಿ ಹೊಸ ವರ್ಷಾಚರಣೆ:
ಮಂಡ್ಯದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ ಕಾವೇರಿ ನದಿ ತೀರಕ್ಕೆ ನಿರ್ಬಂಧ ಹೇರಲಾಗಿದೆ. KRS ಹಿನ್ನೀರು, ಬಲಮುರಿ, ಎಡಮುರಿ, ಮುತ್ತತ್ತಿ ಸೇರಿದಂತೆ ನದಿ ತೀರದ ಸ್ಥಳಗಳಿಗೆ ನಾಳೆ ಬೆಳಗ್ಗೆ 6 ಗಂಟೆಯಿಂದ ಜನವರಿ 1ರ ರಾತ್ರಿ 8ರವರೆಗೆ ಜನರ ಪ್ರವೇಶ ನಿಷೇಧ ಹೇರಲಾಗಿದೆ. ಕಾವೇರಿ ತೀರದಲ್ಲಿ ಮೋಜು-ಮಸ್ತಿಗೆ ಹೋದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ರೊಂದಿಗೆ ಕೈಜೋಡಿಸಿದ ಪಾಲಿಕೆ: ಏನೆಲ್ಲಾ ರೂಲ್ಸ್ ಗೊತ್ತಾ?
ಚಿಕ್ಕಮಗಳೂರಿನಲ್ಲೂ ನಿರ್ಬಂಧ:
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿದಂತೆ ಪ್ರಮುಖ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ನಾಳೆ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಿ ಎಸ್ಪಿ ಸೂಚನೆ ನೀಡಿದ್ದಾರೆ. ರೇವ್ ಪಾರ್ಟಿ, ಡ್ರಗ್ಸ್ ಪಾರ್ಟಿ ಮಾಡಬಾರದು, ರಾತ್ರಿ ವೇಳೆ ಸೌಂಡ್ ಸಿಸ್ಟಮ್ ಹಾಕುವಂತಿಲ್ಲ ಕುಡಿದು ವಾಹನ ಚಾಲನೆ ಮಾಡಿದರೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ