ಬೆಂಗಳೂರು: ಬೆಂಗಳೂರು, ಮಂಗಳೂರು, ಶಿರಸಿಯಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ 10 ಸ್ಥಳಗಳು ಪಿಎಫ್ಐ, ಎಸ್ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್ಐ ಕಚೇರಿಗಳಾಗಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವೆಡೆಯೂ ದಾಳಿ ನಡೆದಿದೆ. ಬೆಂಗಳೂರಿನ ಪಾದರಾಯನಪುರದಲ್ಲಿರುವ ಪಿಎಫ್ಐ ರಾಜ್ಯ ಘಟಕದ ಕಾರ್ಯದರ್ಶಿ ಅಫ್ಸರ್ ಪಾಷಾ ನಿವಾಸದ ಮೇಲೆ, ಟ್ಯಾನರಿ ರಸ್ತೆಯಲ್ಲಿರುವ ಪಿಎಫ್ಐ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಪಾಷಾ ನಿವಾಸ, ರಿಚ್ಮಂಡ್ ಟೌನ್ನಲ್ಲಿರುವ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್ ಮೇಲೆಯೂ ಎನ್‌ಐಎ ದಾಳಿ ನಡೆದಿದೆ. ಬೆಂಗಳೂರಿನ ಮತ್ತೊಂದು ಸ್ಥಳದಲ್ಲಿಯೂ ದಾಳಿ ನಡೆದಿದೆ, ಎಂದು ಹೇಳಲಾಗುತ್ತಿದೆ ಆದರೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
ರಿಚ್ಮಂಡ್ ಟೌನ್ನ ಮೊಹಮದ್ ಸಾಕಿಬ್ ನಿವಾಸದ ಬಳಿ ಸೇರಿರುವ ಬೆಂಬಲಿಗರನ್ನು ಸ್ಥಳೀಯ ಪೊಲೀಸರು ದೂರ ಕಳಿಸುತ್ತಿದ್ದಾರೆ. ಪಾದರಾಯನಪುರ ಹಾಗೂ ಟ್ಯಾನರಿ ರಸ್ತೆಗಳಲ್ಲಿ ದಾಳಿ ನಡೆದ ಮನೆಗಳ ಸಮೀಪ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಲು ಮುಂದಾಗಿದ್ದಾರೆ. ಮೊಹ್ಮದ್ ಸಾಕಿಬ್ ನಿವಾಸದಲ್ಲಿ ಎನ್‌ಐಎ ದಾಳಿ ಅಂತ್ಯಗೊಂಡಿದ್ದು, ಮನೆಯಲ್ಲಿ ಕೆಲ ದಾಖಲೆಗಳನ್ನ ವಶಕ್ಕೆ ಪಡೆದು ಹೊರನಡೆದಿದ್ದಾರೆ.
ಮಂಗಳೂರಿನಲ್ಲಿ 4 ಕಡೆ ದಾಳಿ
ಎಸ್ಡಿಐಪಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬುಬಕರ್ ಕುಳಾಯಿ ಸೋದರ ಅಬ್ದುಲ್ ಖಾದರ್ ಕುಳಾಯಿ ಮನೆ ಮೇಲೆಯೂ ಎನ್‌ಐಎ ದಾಳಿ ನಡೆದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಮತ್ತು ಎಸ್ಡಿಪಿಐ ಜಿಲ್ಲಾ ಕಚೇರಿಯ ಮೇಲೆಯೂ ಎನ್‌ಐಎ ದಾಳಿ ನಡೆದಿದೆ. ಕುಳಾಯಿ, ಕಾವೂರು, ಜೋಕಟ್ಟೆ, ಬಜಪೆಯ ಪಿಎಫ್ಐ ಮತ್ತು ಎಸ್ಡಿಪಿಐ ನಾಯಕರ ಮನೆಗಳ ಮೇಲೆಯೂ ದಾಳಿ ನಡೆದಿದೆ. ಎನ್‌ಐಎ ದಾಳಿಯ ನಂತರ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ದಾಳಿ ನಡೆಯುವ ಸ್ಥಳದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಭದ್ರತೆ ಒದಗಿಸಿದೆ.
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಎರಡು ಪುಸ್ತಕ, ಲ್ಯಾಪ್ಟಾಪ್, 1 ಪೆನ್ಡ್ರೈವ್, 10ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಭಿತ್ತಿಪತ್ರಗಳು, ಟೀ ಶರ್ಟ್ ವಶಕ್ಕೆ ಪಡೆದು ಅಧಿಕಾರಿಗಳು ಹೊರ ನಡೆದರು.
ಶಿರಸಿಯಲ್ಲಿಯೂ ಎನ್‌ಐಎ ದಾಳಿ
ಶಿರಸಿಯ ಎಸ್ಡಿಪಿಐ ಮುಖಂಡ ಅಬ್ದುಲ್ ಶುಕುರ್ ಹೊನ್ನಾವರ್ ಅವರ ಮನೆಯ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ, ಕೆಲವು ದಾಖಲೆಗಳೊಂದು ಅಬ್ದುಲ್ ಶುಕುರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒಂದು ಲ್ಯಾಪ್ಟಾಪ್, ಎರಡು ಮೊಬೈಲ್, ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ.
10 ರಾಜ್ಯಗಳಲ್ಲಿ ದಾಳಿ, 100ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರು ವಶಕ್ಕೆ
ಭಾರತ 10 ರಾಜ್ಯಗಳಲ್ಲಿ ಎನ್‌ಐಎ ಮತ್ತು ಇಡಿ ಅಧಿಕಾರಿಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಗೆ ಅಡ್ಡಿಪಡಿಸಿದ 100ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕರ್ನಾಟಕಕ್ಕಿಂತಲೂ ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ನಗರ-ಪಟ್ಟಣಗಳಲ್ಲಿ ಕಾರ್ಯಾಚರಣೆ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
Published On - 9:06 am, Thu, 22 September 22