ಭಾರತದ ಅಗತ್ಯ, ಆಕಾಂಕ್ಷೆ ಮತ್ತು ಬೇಡಿಕೆಯ ಭಾಗವಾಗಬೇಕು ಖಾಸಗಿ ಕ್ಷೇತ್ರ: ನಿರ್ಮಲಾ ಸೀತಾರಾಮನ್

|

Updated on: Feb 21, 2021 | 2:31 PM

ವಿಶ್ವದ 100 ದೇಶಗಳಿಗೆ ಕೋವಿಡ್ ಲಸಿಕೆ ಪೂರೈಸುವ ಮೂಲಕ ಭಾರತವು ಪ್ರಬಲ ಮೃದು ಶಕ್ತಿ (ಸಾಫ್ಟ್ ಪವರ್) ಎಂದು ಸಾಬೀತುಪಡಿಸಿಕೊಂಡಿತು. ಸಹಬಾಳ್ವೆಯನ್ನು ಒಪ್ಪುವ ದೇಶ ಭಾರತ ಎಂಬ ಸಂದೇಶ ಈ ಮೂಲಕ ರವಾನೆಯಾಯಿತು ಎಂದು ನುಡಿದರು.

ಭಾರತದ ಅಗತ್ಯ, ಆಕಾಂಕ್ಷೆ ಮತ್ತು ಬೇಡಿಕೆಯ ಭಾಗವಾಗಬೇಕು ಖಾಸಗಿ ಕ್ಷೇತ್ರ: ನಿರ್ಮಲಾ ಸೀತಾರಾಮನ್
ಬೆಂಗಳೂರಿನಲ್ಲಿ ಭಾನುವಾರ ನಡೆದ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us on

ಬೆಂಗಳೂರು: ಖಾಸಗಿ ಕ್ಷೇತ್ರಗಳು ಭಾರತದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅಗತ್ಯ, ಆಕಾಂಕ್ಷೆ ಮತ್ತು ಅಗತ್ಯಗಳ ಭಾಗವಾಗಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೈಗಾರಿಕಾ ಕ್ಷೇತ್ರದ ಮುಖ್ಯಸ್ಥರ ಜೊತೆಗೆ ಮಾತನಾಡಿದ ಅವರು, ಈ ವರ್ಷದ ಬಜೆಟ್​ ಅಭಿವೃದ್ಧಿಯ ಕನಸಿಗೆ ಹೊಸ ಶಕ್ತಿ ತುಂಬಲು ಖಾಸಗಿ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸಲಿದೆ ಎಂದರು.

ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಒಕ್ಕೂಟ (Bangalore Chamber of Industry & Commerce – BCIC) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ದಶಕಕ್ಕೆ ಈ ಬಾರಿಯ ಬಜೆಟ್​ ಪಥ ನಿರ್ಮಿಸಿದೆ. ಅತ್ಯಗತ್ಯ ವಲಯಕ್ಕೆ ನೆರವಾಗಲು ಸರ್ಕಾರ ಘೋಷಿಸಿರುವ ನೆರವಿನ ಪ್ಯಾಕೇಜ್ ಆರ್ಥಿಕ ಪ್ರಗತಿಗೆ ಹೊಸ ಬಲ ನೀಡುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.

ಖಾಸಗಿ ಕ್ಷೇತ್ರದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು, ವಿಶ್ವದ 100 ದೇಶಗಳಿಗೆ ಕೋವಿಡ್ ಲಸಿಕೆ ಪೂರೈಸುವ ಮೂಲಕ ಭಾರತವು ಪ್ರಬಲ ಮೃದು ಶಕ್ತಿ (ಸಾಫ್ಟ್ ಪವರ್) ಎಂದು ಸಾಬೀತುಪಡಿಸಿಕೊಂಡಿತು. ಎಲ್ಲರ ಒಳಿತು-ಪ್ರಗತಿ ಆಶಿಸುವ, ಸಹಬಾಳ್ವೆಯನ್ನು ಒಪ್ಪುವ ದೇಶ ಭಾರತ ಎಂಬ ಸಂದೇಶ ಈ ಮೂಲಕ ರವಾನೆಯಾಯಿತು ಎಂದು ನುಡಿದರು.

ಸುಸ್ಥಿರ ಅಭಿವೃದ್ಧಿಯ ಅಗತ್ಯವನ್ನು ಒತ್ತಿಹೇಳಿದ ಅವರು ಪಿಡುಗಿನಿಂದ ಸಂಕಷ್ಟ ಅನುಭವಿಸಿದ ದೇಶದ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ವಿತ್ತೀಯ ಕೊರತೆಯನ್ನು ಮುಂಬರುವ ದಿನಗಳಲ್ಲಿ ನಿಭಾಯಿಸಲು ಸಾಧ್ಯವಿದೆ ಎಂದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಸಂವಾದದಲ್ಲಿ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್​ಜಿ, ಇನ್​ಫೋಸಿಸ್ ಆಡಳಿತ ಮಂಡಳಿ ಸದಸ್ಯ ಮೋಹನ್​ದಾಸ್ ಪೈ, ಹೃದ್ರೋಗ ತಜ್ಞ ದೇವಿ ಶೆಟ್ಟಿ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ

ಉದ್ಯಮ ಲೋಕದ ಗಣ್ಯರ ಉಪಸ್ಥಿತಿ
ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಲಾಯಿತು. ಬಿಸಿಐಸಿ ಅಧ್ಯಕ್ಷ ಟಿ.ಆರ್.ಪರಶುರಾಮನ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ಟಾರ್ಟ್​ಅಪ್​ಗಳ ಕುರಿತು ಮೋಹನ್ ದಾಸ್ ಪೈ, ತಯಾರಿಕೆ ವಲಯದ ಕುರಿತು ರವಿ ರಾಘವನ್, ಆರೋಗ್ಯ ಸೇವೆ ಕುರಿತು ಡಾ.ದೇವಿ ಶೆಟ್ಟಿ, ಕೋವಿಡ್ ಸಾಂಕ್ರಾಮಿಕ ಹಾಗೂ ಲಸಿಕೆ ಕುರಿತು ವಿಪ್ರೊ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಅಧ್ಯಕ್ಷ ಡಾ. ಅಜೀಮ್ ಪ್ರೇಮ್ ಜಿ ಮಾತನಾಡಿದರು ಭಾರತ್ ಫ್ರಿಟ್ಝ್​ಸ್​ವೆರ್ನರ್​ ಲಿಮಿಟೆಡ್​ನ ಸಿಇಒ ರವಿ ರಾಫವನ್ ಪಾಲ್ಗೊಂಡಿದ್ದರು.

Published On - 2:21 pm, Sun, 21 February 21