
ಬೆಂಗಳೂರು, ಸೆಪ್ಟೆಂಬರ್ 20: ಜಾತಿ ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ ಹೇಳಿದರು. ಬೆಂಗಳೂರಲ್ಲಿ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು “ರಾಜ್ಯ ಸರ್ಕಾರದ ಸಮೀಕ್ಷೆಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. 15 ದಿನಗಳಲ್ಲಿ 9 ದಿನ ಎಲ್ಲರೂ ನವರಾತ್ರಿ ಆಚರಣೆಯಲ್ಲಿ ಭಾಗಿಯಾಗುತ್ತಾರೆ.
ನವರಾತ್ರಿಯ ಸಂಭ್ರಮದಲ್ಲಿ ಸಮೀಕ್ಷೆ ಮಾಡಲು ಹೊರಟರೆ ಪೂರ್ಣ ಫಲಿತಾಂಶ ಸಿಗಲು ಸಾಧ್ಯವಿಲ್ಲ. ಹೆಚ್ಚಿನವರು ಈ ರಜೆಯ ಸಂದರ್ಭದಲ್ಲಿ ಪ್ರವಾಸ ಹೋಗುತ್ತಾರೆ. ಈ ಹಿಂದಿನ ರೀತಿ ಆದರೆ ಸಮೀಕ್ಷೆ ಮತ್ತೊಂದು ಮಜಲಿಗೆ ಹೋಗಬಹುದು. ಹೀಗಾಗಿ ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಬೇಕು. 60 ದಿನಗಳ ಕಾಲ ಸಮೀಕ್ಷೆ ನಡೆಸಬೇಕು. ಪ್ರಜ್ಞಾವಂತ ಸರ್ಕಾರ ಇದನ್ನು ಪರಿಗಣಿಸಿ ಸಮೀಕ್ಷೆ ಮುಂದೂಡಬೇಕು ” ಎಂದು ಹೇಳಿದ್ದಾರೆ.
ನಮ್ಮ ಸಮುದಾಯದ 90% ಗಿಂತ ಹೆಚ್ಚು ಜನರು ತಮ್ಮ ಉಪಜಾತಿಯನ್ನು ಬರೆಸಲು ಸಿದ್ಧರಿಲ್ಲ. ಉಪ ಪಂಗಡಗಳ ಅವಶ್ಯಕತೆಯನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಬಳಸಿಕೊಳ್ಳುತ್ತೇವೆ. ಸಮೀಕ್ಷೆ ಮುಂದೂಡಬೇಕು ಎಂಬುದು ನಮ್ಮ ನಿಲುವು ಮತ್ತು ಆಸೆ. ಇದರ ಮಧ್ಯೆ ಕೆಲಸ ಮಾಡಬೇಕಾದವರು ಸಮುದಾಯದ ನಾಯಕರು. ನಾವು ಅವರಿಗೆ ಏನು ನಿರ್ದೇಶನ ಕೊಟ್ಟಿದ್ದೇವೆ ಎಂಬುದು ಮುಂದೆ ಕ್ರಮದಲ್ಲಿ ಗೊತ್ತಾಗುತ್ತದೆ. ಸಮುದಾಯದ ಜೊತೆಗೆ ಧರ್ಮವನ್ನು ಸೇರಿಸಿರುವುದು ಸರಿಯಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದು ಸರಿಪಡಿಸುತ್ತದೆ ಎಂಬ ಮಾಹಿತಿ ಇದೆ. ಹೀಗೇ ಆದರೆ ಮುಂದೆ ಒಕ್ಕಲಿಗ ಮುಸ್ಲಿಂ, ಹಿಂದು ಮುಸ್ಲಿಂ, ಹಿಂದೂ ಕ್ರಿಶ್ಚಿಯನ್ ಎಂದು ಆಗಬಹುದೇನೋ. ಪ್ರಜಾಪ್ರಭುತ್ವದಲ್ಲಿ ನಾಸ್ತಿಕ, ಆಸ್ತಿಕ ಎಂದು ಹೇಗೆ ಬೇಕಾದರೂ ಹೇಳಿಕೊಳ್ಳಬಹುದು. ಸಮೀಕ್ಷೆ ಹೆಚ್ಚು ಪಾರದರ್ಶಕ ಆಗಿರಬೇಕು ಎಂಬುದು ನಮ್ಮ ಬಯಕೆ. ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಬಗ್ಗೆ ಸರ್ಕಾರ, ಆಯೋಗ ಏನು ನಿರ್ಧಾರ ಕೈಗೊಂಡಿದೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ ರಾಜಕೀಯ ವೈರತ್ವ ಬಿಟ್ಟು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಕುಮಾರಸ್ವಾಮಿ, ಡಿಕೆ ಶಿವಕುಮಾರ್!
” ಒಕ್ಕಲಿಗ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡುವ ಕೆಲಸ ಮಾಡಿದ್ದೇವೆ. ಒಕ್ಕಲಿಗ ಎಂಬುದೇ ಮಾನ್ಯವಾದದ್ದು. ಕಾಲಂ 9, 10, 11ರಲ್ಲಿ ಒಕ್ಕಲಿಗ ಎಂದೇ ಬರೆಸಬೇಕು. ಕೋಡ್ ನಂಬರ್ 1541ನ್ನು ಬರೆಸಬೇಕು.ಅವಶ್ಯಕತೆ ಬಿದ್ದರೆ ಉಪ ಪಂಗಡಗಳ ಹೆಸರನ್ನು ನಮೂದಿಸಬಹುದು. ಕಾಂತರಾಜ್ ವರದಿಯಲ್ಲಿ 30-40% ಸಮೀಕ್ಷೆ ಆಗಿಲ್ಲ ಎಂಬ ಕೂಗಿತ್ತು. ಜನರ ಭಾವನೆಗಳಿಗೋಸ್ಕರವೇ ಸರ್ಕಾರ ಮತ್ತು ನಾವು ಇರುವಂಥದ್ದು. ರಾಜ್ಯ ಸರ್ಕಾರದ ಸಮೀಕ್ಷೆಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.” ಎಂದು ಸಭೆ ಬಳಿಕ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ ಹೇಳಿದರು. ಸಭೆಯಲ್ಲಿ ರಾಜ್ಯದ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ ಭಾಗಿಯಾಗಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ