
ಬೆಂಗಳೂರು, ಜುಲೈ 11: ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಹೆಚ್ಚಿನ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿಯೇ, ಐದು ವರ್ಷ ತಾವೇ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಗುರುವಾರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು. ರಾಹುಲ್ ಗಾಂಧಿ ಭೇಟಿಗೂ ಮುನ್ನ ನವದೆಹಲಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಅಧಿಕಾರ ಹಂಚಿಕೆ ಬಗ್ಗೆ ಸ್ಪಷ್ಟ ಮಾತುಗಳನ್ನು ಆಡಿದ್ದರು. ರಾಹುಲ್ ಗಾಂಧಿ ಕೂಡ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ಮನಸ್ಥಿತಿಯಲ್ಲಿ ಇಲ್ಲ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಈ ಸಂದೇಶ ಸಿಕ್ಕ ನಂತರವೇ ಸಿದ್ದರಾಮಯ್ಯ ಗಟ್ಟಿ ದನಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಮಾತುಗಳನ್ನಾಡಿದ್ದಾರೆ.
ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗುರುವಾರದ ಭೇಟಿ ವೇಳೆಯೂ ರಾಹುಲ್ ಗಾಂಧಿ ರವಾನಿಸಿದ್ದಾರೆ ಎನ್ನಲಾಗಿದೆ.
ಸದ್ಯದ ಮಟ್ಟಿಗೆ ನಾಯಕತ್ವ ಬದಲಾವಣೆ ಇಲ್ಲ. ಸಂಪುಟ ಪುನರ್ ರಚನೆ ಕೂಡ ಇಲ್ಲ ಎಂಬ ಸಂದೇಶ ಸಿದ್ದರಾಮಯ್ಯಗೆ ಹೈಕಮಾಂಡ್ ನಾಯಕರಿಂದ ಬಂದಿದೆ. ನವಂಬರ್ ಬಳಿಕವೇ ಸಚಿವ ಸಂಪುಟ ಗುಣ ರಚನೆ ಮಾಡಲಾಗುವುದು ಎಂದು ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ.
ಮತ್ತೊಂದೆಡೆ, ಕಾಂಗ್ರೆಸ್ ಹೈಕಮಾಂಡ್ ಸಚಿವರ ಕಾರ್ಯ ವೈಖರಿ ಪ್ರಗತಿಯ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ. ಈಗಾಗಲೇ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀರ್ ಸುರ್ಜೇವಾಲ ಬೆಂಗಳೂರಿಗೆ ಎರಡು ಬಾರಿ ಆಗಮಿಸಿದ್ದು ಶಾಸಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರ ಜೊತೆಗೂ ಪ್ರತ್ಯೇಕ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಶಾಸಕರಿಗೂ, ಜನರ ಅಹವಾಲುಗಳಿಗೂ ಸರಿಯಾಗಿ ಸ್ಪಂದಿಸದ ಸಚಿವರಿಗೆ ನವೆಂಬರ್ನಲ್ಲಿ ಸಚಿವ ಸಂಪುಟ ಪುನರ್ ರಚನೆ ವೇಳೆ ಕೊಕ್ ಕೊಡುವುದು ಬಹುತೇಕ ಖಚಿತವಾಗಿದೆ. ಬಾಕಿ ಉಳಿದಿರುವ ನಿಗಮ ಮಂಡಳಿಗಳ ಸ್ಥಾನ ಭರ್ತಿಗೆ ಮಾತ್ರ ಹೈಕಮಾಂಡ್ ಸದ್ಯ ಒಲವು ತೋರಿದೆ ಎನ್ನಲಾಗಿದೆ.
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸದ್ಯ ಯಾವುದೇ ಪ್ರಯೋಗ ನಡೆಸುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲ ಎಂದು ಮೂಲಗಳು ತಿಳಿಸಿವೆ. ಇದು ಗೊತ್ತಾದ ನಂತರ, ಮತ್ತಿ ಹೈಕಮಾಂಡ್ ಸಂದೇಶ ಸಿಕ್ಕ ಬಳಿಕವೇ ಸಿದ್ದರಾಮಯ್ಯ ದೃಢವಾಗಿ, ತಾವೇ ಐದು ವರ್ಷ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಜತೆ ಮಾತುಕತೆಗೂ ಮುನ್ನ ತಾವೇ 5 ವರ್ಷ ಸಿಎಂ ಎಂದ ಸಿದ್ದರಾಮಯ್ಯ
ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ ಹೌದು. ಆದರೆ, ಸದ್ಯಕ್ಕೆ ಹುದ್ದೆ ಖಾಲಿ ಇಲ್ಲ. ಅದನ್ನು ಅವರೂ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಲಿದ್ದೇನೆ ಎಂದು ಸಿದ್ದರಾಮಯ್ಯ ಗುರುವಾರ ಹೇಳಿದ್ದರು.
Published On - 9:11 am, Fri, 11 July 25