Corona New Guidelines: ರಾಜ್ಯದಲ್ಲಿ ಲಾಕ್​ಡೌನ್, ನೈಟ್ ಕರ್ಫ್ಯೂ ಇಲ್ಲ; ನೂತನ ಕೊರೊನಾ ತಡೆ ಮಾರ್ಗದರ್ಶಿ ಸೂತ್ರ ಬಿಡುಗಡೆ

|

Updated on: Apr 02, 2021 | 3:28 PM

ಕೈಗಾರಿಕೆ, ಐಟಿ ಸಂಸ್ಥೆಗಳಿಗೆ ಹೋಗಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಾತ್ರೆ, ಧಾರ್ಮಿಕ ಉತ್ಸವಗಳಿಗೆ ನಿಯಂತ್ರಿಸಿದ್ದೇವೆ. ಶಾಲೆಗಳನ್ನು ಭೌತಿಕವಾಗಿ ನಡೆಸೋದು ಬೇಡ ಅಂತಲೂ ನಿರ್ಧರಿಸಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದರು.

Corona New Guidelines: ರಾಜ್ಯದಲ್ಲಿ ಲಾಕ್​ಡೌನ್, ನೈಟ್ ಕರ್ಫ್ಯೂ ಇಲ್ಲ; ನೂತನ ಕೊರೊನಾ ತಡೆ ಮಾರ್ಗದರ್ಶಿ ಸೂತ್ರ ಬಿಡುಗಡೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ಅಥವಾ ಸೆಮಿ ಲಾಕ್​ಡೌನ್ ಮಾಡುವುದಿಲ್ಲ. ನೈಟ್ ಕರ್ಫ್ಯೂವನ್ನು ಸಹ ಜಾರಿಗೊಳಿಸುವುದಿಲ್ಲ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಹಾಸಿಗೆ ಮೀಸಲು ಇಡಲಾಗುತ್ತದೆ. ರಾಜ್ಯದಲ್ಲಿ ಕೊರೊನಾ ಸೋಂಕು ಬಹಳ ಹೆಚ್ಚಾಗುತ್ತಿದೆ. ಹೀಗಾಗಿ, ಕಟ್ಟುನಿಟ್ಟಾಗಿ ನಿಯಮಗಳನ್ನು ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಕೈಗಾರಿಕೆ, ಐಟಿ ಸಂಸ್ಥೆಗಳಿಗೆ ಹೋಗಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಾತ್ರೆ, ಧಾರ್ಮಿಕ ಉತ್ಸವಗಳಿಗೆ ನಿಯಂತ್ರಿಸಿದ್ದೇವೆ. ಶಾಲೆಗಳನ್ನು ಭೌತಿಕವಾಗಿ ನಡೆಸೋದು ಬೇಡ ಅಂತಲೂ ನಿರ್ಧರಿಸಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದರು.

ನೆರೆಯ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ವಾಣಿಜ್ಯ ಚಟುವಟಿಕೆಗಳನ್ನು ರಾಜ್ಯದಲ್ಲಿ ನಿಯಂತ್ರಿಸುವ ಅಗತ್ಯ ಇಲ್ಲ. ಬದಲಾಗಿ ಜನಸಂದಣಿ ಸೇರುವುದನ್ನು ತಡೆಯಬೇಕಾದ ಅಗತ್ಯ ಇದೆ. ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಧಾರ್ಮಿಕ ಆಚರಣೆಗಳನ್ನು ಸಂಪ್ರದಾಯಕ್ಕಷ್ಟೇ ಸೀಮಿತಗೊಳಿಸಿ ಆಚರಿಸಬೇಕಿದೆ. ಬೇರೆಬೇರೆ ವಲಯಗಳ ನೌಕರರಿಗೆ ಕಡಿಮೆ ಅವಧಿಗೆ ಕೆಲಸದ ಪಾಳಿಗಳನ್ನು ನೀಡಬೇಕು. ಸಮೂಹ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಗೂ ಮಿತಿ ಹೇರಬೇಕಿದೆ. ಕರ್ನಾಟಕದಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ಇನ್ನೂ ಚುರುಕುಗೊಳಿಸುವ ಅಗತ್ಯವಿದೆ ಎಂದು ಕೇಂದ್ರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ರಾಜ್ಯದ ಪರವಾಗಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮನವರಿಕೆ ಮಾಡಿಕೊಟ್ಟರು.

ದೇಶದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವ ಕಾರಣ ಕೇಂದ್ರ ಸಂಪುಟ ಕಾರ್ಯದರ್ಶಿ ವಿವಿಧ ರಾಜ್ಯಗಳ ಮುಖ್ಯಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರ ಸಭೆ ನಡೆಸಿದರು. ಈ ಸಭೆಯ ನಂತರ ಕೊರೊನಾ ಸೋಂಕು ತಡೆಯಲು ರೂಪಿಸಿರುವ ನೂತನ ಮಾರ್ಗದರ್ಶಿ ಸೂತ್ರಗಳು ಬಿಡುಗಡೆಯಾಗಿವೆ. ರಾಜ್ಯದ ಪರವಾಗಿ ಮುಖ್ಯಕಾರ್ಯದರ್ಶಿ ರವಿಕುಮಾರ್, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಗೃಹ ಕಾರ್ಯದರ್ಶಿ, ಕೊವಿಡ್‌ಗೆ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಸಭೆಯಲ್ಲಿ ಕೇಂದ್ರ ಸರ್ಕಾರ ನೀಡುವ ಸಲಹೆ ಮೇರೆಗೆ ನೂತನ ಗೈಡ್​ಲೈನ್ಸ್ ಬಿಡುಗಡೆ ಮಾಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 81,466 ಹೊಸ ಕೊರೊನಾ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಅಲ್ಲದೇ ಕೊರೊನಾ ಲಸಿಕೆ ವಿತರಣೆಯೂ ವೇಗವಾಗಿ ನಡೆಯುತ್ತಿದ್ದು ಕಳೆದ 24 ಗಂಟೆಗಳಲ್ಲಿ 36 ಲಕ್ಷ ಡೋಸ್ ಕೊರೊನಾ ಲಸಿಕೆ ವಿತರಣೆ ನಡೆದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕೊರೊನಾ ನಡುವೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟ

ಕೊವಿಡ್ ಹಾವಳಿ ಶಾಂತವಾದ ನಂತರ ಹುಟ್ಟಿಕೊಳ್ಳಲಿವೆಯೇ ಸೂಪರ್ ಬ್ಯಾಕ್ಟೀರಿಯಾಗಳು?

Published On - 3:16 pm, Fri, 2 April 21