ಪ್ರಜ್ವಲ್ ರೇವಣ್ಣಗೆ ಇಂದೂ ಸಿಗಲಿಲ್ಲ ಜಾಮೀನು; ನ. 24ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣನವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಜ್ವಲ್ ರೇವಣ್ಣ ಅವರ ಸೆರೆವಾಸದ ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂದು ಪ್ರಜ್ವಲ್ ಅವರಿಗೆ ಜಾಮೀನು ಸಿಗುವ ನಿರೀಕ್ಷೆಯಿತ್ತು. ಆದರೆ, ಇಂದು ಕೂಡ ಅವರಿಗೆ ನಿರಾಸೆಯಾಗಿದ್ದು, ನವೆಂಬರ್ 24ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಪ್ರಜ್ವಲ್ ರೇವಣ್ಣಗೆ ಇಂದೂ ಸಿಗಲಿಲ್ಲ ಜಾಮೀನು; ನ. 24ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
Prajwal Revanna

Updated on: Nov 13, 2025 | 8:32 PM

ಬೆಂಗಳೂರು, ನವೆಂಬರ್ 13: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್​ಡಿ ರೇವಣ್ಣನವರ ಮಗ, ಜೆಡಿಎಸ್ ಮಾಜಿ ಸಂಸದರೂ ಆಗಿದ್ದ ಪ್ರಜ್ವಲ್ ರೇವಣ್ಣನವರಿಗೆ (Prajwal Revanna) ಸದ್ಯಕ್ಕೆ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸಿದ್ದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಈ ಶಿಕ್ಷೆಯನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಇಂದು ಆ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತು.

ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಗಳಲ್ಲಿ ಪರಸ್ಪರ ಹೊಂದಾಣಿಕೆಯಿಲ್ಲ, ಪ್ರಜ್ವಲ್ ರೇವಣ್ಣ ತಪ್ಪಿತಸ್ಥನೆಂದು ತೋರಿಸುವ ಯಾವುದೇ ಪ್ರಬಲ ಸಾಕ್ಷ್ಯಗಳಿಲ್ಲ. 4 ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಯಾವುದೇ ವಿಶ್ವಾಸಾರ್ಹತೆ ಇಲ್ಲದ ವಿಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿದೆ. ಫಾರ್ಮ್‌ಹೌಸ್‌ನ ಅಂದಿನ ಮಾಲೀಕರ ಹೇಳಿಕೆಯನ್ನು ದಾಖಲಿಸಿಲ್ಲ. ಕೃತ್ಯ ನಡೆದ ಸ್ಥಳದಲ್ಲಿದ್ದವರ ಹೇಳಿಕೆ ದಾಖಲಿಸಿಲ್ಲ ಎಂದಿದ್ದರು.

ಇದನ್ನೂ ಓದಿ: ಜೀವಿತಾವಧಿ ಶಿಕ್ಷೆ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್, ಸರ್ಕಾರಕ್ಕೆ ಕೋರ್ಟ್ ಮಹತ್ವದ ಸೂಚನೆ

ಸಂತ್ರಸ್ತೆಯ ಮೊಬೈಲ್ ಸಿಡಿಆರ್ ಹಾಜರುಪಡಿಸಿಲ್ಲ. ಸಂತ್ರಸ್ತೆಯ ಬಟ್ಟೆ ವಶಕ್ಕೆ ಪಡೆದ ರೀತಿಯ ಬಗ್ಗೆಯೂ ಅನುಮಾನಗಳಿವೆ. ಹೀಗಾಗಿ ಪ್ರಜ್ವಲ್ ಅವರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಅವರು ವಾದ ಮಂಡನೆ ವೇಳೆ ಮನವಿ ಮಾಡಿದ್ದರು. ನಮ್ಮ ವಾದವನ್ನು ಸೂಕ್ತ ರೀತಿಯಲ್ಲಿ ಆಲಿಸದೇ ವಿಚಾರಣಾಧೀನ ನ್ಯಾಯಾಲಯವು ಗರಿಷ್ಠ ಶಿಕ್ಷೆಯನ್ನು ವಿಧಿಸಿದೆ ಎಂದು ಪ್ರಜ್ವಲ್ ಪರ ವಕೀಲರು ಇಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ: ಕೋಚ್ ಫೋನ್​ ನಲ್ಲಿ ಮಹಿಳೆಯರ 2500 ರಾಸಲೀಲೆ ವಿಡಿಯೋ

ಆದರೆ, ಇಂದು ಕೂಡ ಪ್ರಜ್ವಲ್​ಗೆ ಜಾಮೀನು ಸಿಕ್ಕಿಲ್ಲ. ಪ್ರಾಸಿಕ್ಯೂಷನ್ ವಾದಮಂಡನೆಗೆ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಲಾಗಿದೆ. ಹೈಕೋರ್ಟ್​ ನ್ಯಾಯಮೂರ್ತಿಗಳಾದ ಕೆ.ಎಸ್‌ ಮುದಗಲ್‌ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್‌ ನಾಯಕ್‌ ಅವರ ಪೀಠ ಇಂದು ಅರ್ಜಿ ವಿಚಾರಣೆ ನಡೆಸಿತು. ಪ್ರಾಸಿಕ್ಯೂಷನ್‌ ಪರವಾಗಿ ನವೆಂಬರ್‌ 24ರಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ