ಬೀದರ್: ಅತೀ ಹೆಚ್ಚು ತಾಂಡಾಗಳನ್ನು ಹೊಂದಿರುವ ಭಾಗ ಎಂದರೆ ಅದು ಬೀದರ್ ಜಿಲ್ಲೆ. ಆದರೆ ಇಂದಿಗೂ ಕೂಡ ಜಿಲ್ಲೆಯ ಕೆಲವು ತಾಂಡಾಗಳು ಮೂಲಭೂತ ಸೌಲಭ್ಯಗಳಿಲ್ಲದೆ ಜೀವನ ನಡೆಸುವಂತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹಿಮ್ಲಾನಾಯಕ ವಡೆನಬಾಂಗ ತಾಂಡ ರಸ್ತೆ ಇಲ್ಲದೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ತಾಂಡಾದ ನಿವಾಸಿಗಳು ಕಳೆದ ಐದು ದಶಕದಿಂದ ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಈ ತಾಂಡಾ ಹುಟ್ಟಿಕೊಂಡು ಐದು ದಶಕ ಕಳೆದರು ತಾಂಡಾಕ್ಕೆ ಹೋಗಲು ಇಂದಿಗೂ ಕೂಡಾ ರಸ್ತೆಯಿಲ್ಲ. ಕಲ್ಲು, ಮುಳ್ಳಿನಿಂದ ಕೂಡಿದ ದಾರಿ ಇದ್ದು, ರೈತರ ಜಮೀನಿನಲ್ಲಿಯೇ ನಡೆದುಕೊಂಡು ಹೋಗಿ ಕೂಲಿ ಕೆಲಸ, ವ್ಯಾಪಾರ ನಡೆಸಬೇಕಿದೆ. ಅಲ್ಲದೇ ಮಕ್ಕಳ ಶಿಕ್ಷಣ ಕಲಿಯಲಿಕೆಗೆ ಕೂಡಾ ಮುಳ್ಳುದಾರಿಯೇ ಸೀಮಿತವಾಗಿದೆ.
ಮಳೆಗಾಲದಲ್ಲಿ ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡುವುದರಿಂದ. ಈ ಸಮಯದಲ್ಲಿ ಜನರು ಓಡಾಡುವುದಕ್ಕೆ ರೈತರು ಅವಕಾಶವನ್ನು ಕೊಡುವುದಿಲ್ಲ. ಇದರಿಂದಾಗಿ ಈ ಭಾಗದ ಜನರು ಹಳ್ಳ ದಾಟಿ ಹೋಗಬೇಕು. ಇನ್ನು ಮಳೆ ಜೋರಾಗಿದ್ದರೆ ಓಡಾಡುವುದಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ವಾರಗಳ ಕಾಲ ಮನೆಯಲ್ಲಿಯೇ ಕೆಲಸ ಕಾರ್ಯಗಳನ್ನು ಬಿಟ್ಟು ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಈವರೆಗೆ ನಮ್ಮ ಸಮಸ್ಯೆ ಯಾರಿಗೆ ಹೇಳಿದರೂ ಬಗೆಹರಿಯುತ್ತಿಲ್ಲ. ರಸ್ತೆ ಒಂದಿಲ್ಲ ಎಂದರೆ ಓಡಾಟ ಹೇಗೆ ಮಾಡುವುದು ಎಂದು ತಾಂಡಾ ನಿವಾಸಿ ಲಕ್ಷ್ಮಿಬಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಸಿಕ್ಕಿ ವರ್ಷಗಳೇ ಉರುಳಿದರು ಈ ತಾಂಡಾ ಇನ್ನೂ ರಸ್ತೆಯನ್ನು ಕಂಡಿಲ್ಲ. ಹೀಗಾಗಿ ಬಸ್ ಸೇವೆಯೂ ಇಲ್ಲಿಗೆ ಇಲ್ಲ. ಇದರಿಂದ ಕಿಲೋಮೀಟರ್ ಗಟ್ಟಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿನವರಿಗಿದೆ. ಇನ್ನೂ ಈ ತಾಂಡಾಕ್ಕೆ ಆ್ಯಂಬುಲೆನ್ಸ್ಗಳು ಬರುವುದಕ್ಕೆ ಸಾಧ್ಯವಿಲ್ಲ. ಬಂದರೂ ಮೂರು ಕಿಲೋಮೀಟರ್ ದೂರದಲ್ಲಿ ನಿಂತುಕೊಳ್ಳುತ್ತವೆ. ಹೀಗಾಗಿ ವಾಹನಗಳು ತಾಂಡಾಕ್ಕೆ ಬಾರದಿರವುದರಿಂದ ಗರ್ಭಿಣಿಯರಿಗೆ ಹೆರಿಗೆ ರಸ್ತೆಯಲ್ಲಿಯೇ ಆಗಿರುವ ಹಲವು ಉದಾಹರಣೆ ಕೂಡಾ ಇಲ್ಲಿದೆ.
ಈ ತಾಂಡಾದಲ್ಲಿ 62 ಕುಟುಂಬಗಳಿದ್ದು, 291 ಜನ ಇಲ್ಲಿ ವಾಸಿಸುತ್ತಾರೆ. ಇಲ್ಲಿನ ವಾಸಿಗರು ರಸ್ತೆ ಸೌಕರ್ಯವಿಲ್ಲದೆ ಅನಾದಿ ಕಾಲದಿಂದ ಸಮಸ್ಯೆ ಅನುಭವಿಸುತ್ತಾ ಬಂದಿದ್ದಾರೆ. ಗ್ರಾಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಹೋಗಿದ್ದಾರೆ. ಆದರೆ ಏನು ಪ್ರಯೋಜನವಿಲ್ಲ. ಸರ್ಕಾರಗಳು ಬದಲಾದವು, ಅಧಿಕಾರಿಗಳು ಬದಲಾದರು. ಆದರೆ ನಮ್ಮ ತಾಂಡಾಕ್ಕೆ ರಸ್ತೆ ಮಾತ್ರ ಬರಲಿಲ್ಲ. ಗ್ರಾಮದಲ್ಲಿ ರಾತ್ರಿ ಹೊತ್ತಲ್ಲಿ ಏನಾದರೂ ಸಮಸ್ಯೆಯಾದರೆ ದೇವರೆ ಗತಿ. ಗ್ರಾಮಕ್ಕೆ ಹೊಂದಿಕೊಂಡು ಹಳ್ಳವಿದೆ ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ಜಾಸ್ತಿಯಾದರೆ ತಾಂಡಾದ ಸಂಪರ್ಕ ಕಳೆದು ಕೊಳ್ಳುತ್ತದೆ. ನಾವು ಏನು ಮಾಡುವುದು. ಪ್ರತಿ ದಿನ ಮೂರು ಕಿಲೋಮೀಟರ್ ನಡೆಯಬೇಕು ಎಂದು ತಾಂಡಾದ ಮುಖ್ಯಸ್ಥ ತುಳಸಿರಾಮ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ನಾಯಕ್ ತಾಂಡಾದಲ್ಲಿ 6 ಕೋಟಿ ರೂ ಗಾಂಜಾ ಪ್ರಕರಣ: CPI ಸೇರಿ 5 ಸಿಬ್ಬಂದಿ ಅಮಾನತು
ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಸೇತುವೆ ಕುಸಿತ; ಕಾವೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್