ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸಿರುವ ಹೊತ್ತಿನಲ್ಲಿ ಲಸಿಕೆ ಕೊರತೆಯೂ ತಲೆದೋರಿರುವುದು ಮತ್ತಷ್ಟು ಸಂಕಟಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಬಹುತೇಕ ಎಲ್ಲಾ ಕಡೆ ಕೊರೊನಾ ಲಸಿಕೆಗೆ ಅಭಾವ ಉಂಟಾಗಿರುವ ಕಾರಣ ಜನರು ಎರಡನೇ ಡೋಸ್ ಪಡೆಯಲು ಸಾಧ್ಯವಾಗದೇ ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಹರಸಾಹಸಪಟ್ಟ ವೃದ್ಧ ದಂಪತಿ ಅವ್ಯವಸ್ಥೆಯಿಂದ ಬೇಸತ್ತು ಮಧ್ಯರಾತ್ರಿ 2 ಗಂಟೆಗೆ ಯಲಹಂಕದ ಪಿಯು ಕಾಲೇಜಿನ ಲಸಿಕಾ ಕೇಂದ್ರಕ್ಕೆ ಬಂದ ಘಟನೆ ನಡೆದಿದೆ.
ಅಟ್ಟೂರು ಲೇಔಟ್ ನಿವಾಸಿಗಳಾದ ದೇವೇಂದ್ರಪ್ಪ (65 ವರ್ಷ), ಲಕ್ಷ್ಮಮ್ಮ (56 ವರ್ಷ) ಏಪ್ರಿಲ್ 3 ರಂದು ಮೊದಲ ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡಿದ್ದರು. ಇಬ್ಬರೂ ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದು, ಮೇ 1ರಂದು 2ನೇ ಡೋಸ್ ಪಡೆಯಲು ಬನ್ನಿ ಎಂದು ಕೇಂದ್ರದಲ್ಲಿ ಹೇಳಿಕಳುಹಿಸಿದ್ದರು. ಆದರೆ, ಕಳೆದ ಒಂದು ವಾರದಿಂದ ಮೂರು ಬಾರಿ ಲಸಿಕಾ ಕೇಂದ್ರಕ್ಕೆ ಬಂದರೂ ಲಸಿಕೆ ಸಿಗದ ಕಾರಣ ವಾಪಾಸು ಹೋಗುವಂತಾಗಿದೆ. ಇದರಿಂದ ಬೇಸತ್ತ ದಂಪತಿ ಟೋಕನ್ ಕೊಡುತ್ತಾರೆ ಎಂದು ಮಧ್ಯರಾತ್ರಿಯೇ ಕೇಂದ್ರಕ್ಕೆ ಬಂದಿದ್ದಾರೆ.
ಕೇವಲ ಬೆಂಗಳೂರಿನಲ್ಲಿ ಮಾತ್ರ ಅಲ್ಲದೇ ರಾಜ್ಯದ ಹಲವೆಡೆ ಈ ಸಮಸ್ಯೆ ತಲೆದೋರಿದ್ದು, ಎರಡನೇ ಡೋಸ್ ಲಸಿಕೆ ಪಡೆಯಲಾಗದೇ ಜನರು ಪರದಾಟ ನಡೆಸುತ್ತಿದ್ದಾರೆ. ಏತನ್ಮಧ್ಯೆ ಮೇ 1ರಿಂದ 18ರಿಂದ 44 ವರ್ಷದವರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿತ್ತಾದರೂ ಇದೀಗ ರಾಜ್ಯದಲ್ಲಿ ಎರಡನೇ ಡೋಸ್ ಪೂರೈಕೆಗೆ ಸಮರ್ಪಕ ವ್ಯವಸ್ಥೆ ಮಾಡುವ ತನಕ 18-44 ವರ್ಷದವರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಸರ್ಕಾರ ತಿಳಿಸಿದೆ.
ಇದನ್ನೂ ಓದಿ:
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು 7 ಕಿ.ಮೀ. ನಡೆದುಕೊಂಡು ಬಂದ ವ್ಯಕ್ತಿ, ಆದರೆ ಲಸಿಕೆನೇ ಇಲ್ಲ ಎಂದ ಸಿಬ್ಬಂದಿ