ಬೆಂಗಳೂರು, ಅಕ್ಟೋಬರ್ 11: 50ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು (Kannada Rajyostva) ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ. ನವೆಂಬರ್ 1ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ನವೆಂಬರ್ 1ರಂದು ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ (Kannada Flag) ಹಾರಿಸಲೇಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಜಿಲ್ಲೆಯಲ್ಲಿ ಶೇ 50 ರಷ್ಟು ಜನ ಹೊರಗಿನಿಂದ ಬಂದವರಿದ್ದಾರೆ. ಹೊರಗಿನಿಂದ ಬಂದವರು ಸಹ ಕನ್ನಡ ಕಲಿಯಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಬೇಕು. ರಾಷ್ಟ್ರಧ್ವಜದ ರೀತಿ ಕನ್ನಡ ಬಾವುಟಕ್ಕೆ ಗೌರವ ಕೊಡಬೇಕು. ಬಾವುಟ ಹಾರಿಸುವ ಮೂಲಕ ಶ್ರದ್ಧಾ, ಭಕ್ತಿ ಗೌರವ ತೋರಿಸಬೇಕು ಎಂದರು.
ಇದನ್ನೂ ಓದಿ: 69 ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು 50 ಜನರ ಸಮಿತಿ ರಚನೆ
ಬೆಂಗಳೂರಿನಲ್ಲಿ ಎಲ್ಲರೂ ರಾಜೋತ್ಸವ ಆಚರಣೆ ಮಾಡುತ್ತಾರೆ. ರಾಜ್ಯೋತ್ಸವ ಆಚರಣೆಗೆ ಯಾವ ಕನ್ನಡ ಸಂಘಟನೆಗಳು ಕೂಡ ಒತ್ತಡ ಹೇರಬಾರದು. ಸರ್ಕಾರವೇ ಆದೇಶಿಸಿದೆ. ಅದರಂತೆ ರಾಜೋತ್ಸವ ಆಚರಣೆ ಮಾಡುತ್ತಾರೆ. ಆಚರಣೆ ಮಾಡದ ಸಂಸ್ಥೆ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅಂತ ಸರ್ಕಾರ ನಿರ್ಧಾರ ಮಾಡುತ್ತೆ. ಕನ್ನಡ ಸಂಘಟನೆಗಳು ಖಾಸಗಿ ಸಂಸ್ಥೆಗಳ ಬಳಿ ಹೋಗಿ ಗಲಾಟೆ, ಬೆದರಿಸುವುದು ಬೇಡ ಎಂದು ಹೇಳಿದರು.
ಕೊರೊನಾ ಅಕ್ರಮ ಕುರಿತ ತನಿಖೆಗೆ ಎಸ್ಐಟಿ ರಚನೆ ವಿಚಾರವಾಗಿ ಮಾತನಾಡಿದ ಅವರು, ನನ್ನ ನೇತೃತ್ವದಲ್ಲಿ ಸಬ್ ಕಮಿಟಿ ಮಾಡಲಾಗಿದೆ. ಹಬ್ಬದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ. ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾಡಿದ್ದು ಮಾತನಾಡುತ್ತೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 am, Fri, 11 October 24