ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು ಮೂರು ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. 34 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಒಮಿಕ್ರಾನ್ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಐವರು, ದ್ವಿತೀಯ ಸಂಪರ್ಕದಲ್ಲಿ 15 ಜನರನ್ನು ಪತ್ತೆ ಮಾಡಲಾಗಿದೆ. ಎಲ್ಲ ಸಂಪರ್ಕಿತರ ಸ್ಯಾಂಪಲ್ಸ್ ಪಡೆದು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನಿಸಲಾಗಿದೆ ಎಂದು ಟ್ವೀಟ್ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
Third case of #Omicron has been detected in Karnataka. A 34-year-old male returning from South Africa has tested positive. He is isolated and being treated in a govt hospital. 5 primary and 15 secondary contacts have been traced and samples sent for testing. @BSBommai #COVID19
— Dr Sudhakar K (@mla_sudhakar) December 12, 2021
ಬೆಂಗಳೂರು ಮೂಲದ 34ವರ್ಷದ ವ್ಯಕ್ತಿಗೆ ಒಮಿಕ್ರಾನ್ ದೃಢಪಟ್ಟಿದೆ. ದಕ್ಷಿಣ ಆಪ್ರೀಕಾದಿಂದ ಡಿಸೆಂಬರ್ 1 ರಂದು ಮಧ್ಯರಾತ್ರಿ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಬೆಂಗಳೂರು ಏರ್ಪೋರ್ಟ್ನಲ್ಲಿ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಏರ್ಪೋರ್ಟ್ನಲ್ಲಿ ಕೊವಿಡ್ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿತ್ತು. ನಂತರ ಆ ವ್ಯಕ್ತಿಯನ್ನು ಬಿಬಿಎಂಪಿ ಹೋಮ್ ಐಸೊಲೇಸನ್ ಮಾಡಿತ್ತು. ಡಿಸೆಂಬರ್ 2 ರಂದು ಒಮಿಕ್ರಾನ್ ಲಕ್ಷಣ ಕಾಣಿಸಿದೆ. ಡಿಸೆಂಬರ್ 2 ರಂದು ಮತ್ತೆ ಕೊವಿಡ್ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿದೆ. ದಕ್ಷಿಣ ಆಫ್ರಿಕಾದಿಂದ ವ್ಯಕ್ತಿ ಬಂದಿದ್ದ ಕಾರಣ ಪಾಸಿಟಿವ್ ವರದಿ ಬರುತ್ತಿದ್ದಂತೆ ತಕ್ಷಣ ವ್ಯಕ್ತಿಯನ್ನು ಬಿಬಿಎಂಪಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಡಿಸೆಂಬರ್ 3 ರಂದೆ ಸ್ಯಾಂಪಲ್ಸ್ ಪಡೆದು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳಿಸಲಾಗಿತ್ತು. ಇಂದು ಈ 34 ವರ್ಷದ ವ್ಯಕ್ತಿಯ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿ ಬಂದಿದ್ದು ಒಮಿಕ್ರಾನ್ ದೃಢಪಟ್ಟಿದೆ.
ಇನ್ನು ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಪತ್ತೆಯಾಗಿದ್ದು ಸರ್ಕಾರದಿಂದ ಇದುವರೆಗೆ ಯಾವುದೇ ಕಠಿಣ ನಿಯಮ ಜಾರಿಯಾಗದ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿದ್ದಾರೆ. ಲಾಕ್ಡೌನ್ ಮಾತ್ರವೇ ಕಠಿಣ ಕ್ರಮ ಅಲ್ಲ. ಜನ ಜಾಗೃತರಾಗಿರಬೇಕು. ಮೊದಲ ಅಲೆಯಲ್ಲಿ ಮೊದಲ ಸಲ ದೇಶದಲ್ಲಿ ಲಾಕ್ಡೌನ್ ಜಾರಿ ಆಯ್ತು. ಆಗ ಕೊರೊನಾ ಹೊಸದು, ಆಗ ನಮ್ಮ ತಯಾರಿ ಇರಲಿಲ್ಲ
ಆಗ ಲಾಕ್ಡೌನ್ ಅಗತ್ಯವಿತ್ತು. ಈಗ ಸ್ಥಳೀಯವಾಗಿ ಕಂಟೈನ್ಮೆಂಟ್ ವಲಯ ಮಾಡಲಾಗಿದೆ. ಜಿಲ್ಲಾವಾರು ಕೊರೊನಾ ನಿಯಮಗಳ ಪಾಲನೆಗೆ ಡಿಸಿಗಳಿಗೆ ಸಿಎಂ ಸೂಚಿಸಿದ್ದಾರೆ. ಲಸಿಕಾಕರಣ ಅಭಿಯಾನ ದೊಡ್ಡದಾಗಿ ಆಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಈಗ ಆರೋಗ್ಯ ಸೌಲಭ್ಯಗಳು ಹೆಚ್ಚಾಗಿವೆ. ತಾಲ್ಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಘಟಕಗಳ ವ್ಯವಸ್ಥೆ ಇದೆ. ನಾವು ಈಗ ಕೋವಿಡ್ ಎದುರಿಸಲು ಸಂಪೂರ್ಣ ಸಜ್ಜಾಗಿದ್ದೇವೆ. ಅದಕ್ಕಾಗಿ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹಾಕೋದಿಕ್ಕೆ ಆಗೋದಿಲ್ಲ ಎಂದರು.
ಕರ್ನಾಟಕ, ಪಂಜಾಬ್ ಹಾಗೂ ಆಂಧ್ರಪ್ರದೇಶ ಸೇರಿ ಒಟ್ಟು 3 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ‘ಸಾರ್ವಜನಿಕರು ಚಿಂತಿಸಬೇಡಿ ಮತ್ತು ಯಾವುದೇ ವದಂತಿಗಳನ್ನು ನಂಬಬೇಡಿ. ಆದರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುವುದನ್ನು ಮುಂದುವರಿಸಿ. ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈ ತೊಳೆಯುವುದು ಮೊದಲಾದ ಸುರಕ್ಷತಾ ನಿಯಮ ಪಾಲಿಸಿ’ ಎಂದು ಆಂಧ್ರಪ್ರದೇಶದ ಸಾರ್ವಜನಿಕ ಆರೋಗ್ಯ ಇಲಾಖೆ ಒತ್ತಿಹೇಳಿದೆ.
ನಿನ್ನೆ (ಶನಿವಾರ) ನವೆಂಬರ್ನಲ್ಲಿ ಭಾರತಕ್ಕೆ ಆಗಮಿಸಿದ ಇಟಲಿಯ 20 ವರ್ಷದ ವ್ಯಕ್ತಿಗೆ ಚಂಡೀಗಢದಲ್ಲಿ ಒಮಿಕ್ರಾನ್ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ 9, ಗುಜರಾತ್‌ನಲ್ಲಿ 3, ದೆಹಲಿ ಎರಡು ಪ್ರಕರಣಗಳು ಪತ್ತೆಯಾದಂತಾಗಿದೆ.
ಇದನ್ನೂ ಓದಿ: Omicron: ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶದಲ್ಲಿ ಮತ್ತೆ 3 ಒಮಿಕ್ರಾನ್ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆ
Published On - 1:46 pm, Sun, 12 December 21