
ಬೆಂಗಳೂರು, ಮೇ 09: ಪಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ (Indian Army) ಆಪರೇಷನ್ ಸಿಂದೂರ್ (Operation Sindoor) ಮೂಲಕ ಪ್ರತ್ಯುತ್ತರ ನೀಡಿದೆ. ಸದ್ಯ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಭೀತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸುತ್ತೋಲೆ ಹೊರಡಿಸಿದೆ.
“ಉಗ್ರ ಕೃತ್ಯಗಳಂತಹ ಪ್ರಕರಣಗಳಲ್ಲಿ ಭಾಗಿಯಾದವರು, ಶಿಕ್ಷೆಗೊಳಗಾದವರು, ಭಯೋತ್ಪಾದನೆ ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾದವರು, ಡಿಟೋನೇಟರ್ ನಂತಹ ಉಪಕರಣಗಳ ತಯಾರು ಮಾಡುವ ಸ್ಥಳ, ಮೂಲಭೂತವಾದದ ಮೂಲಕ ಮಾಡುವಂತಹ ಕೃತ್ಯದಲ್ಲಿ ಭಾಗಿಯಾದವರು, ಭಾಷಣ, ಘೋಷಣೆಗಳ ಮೂಲಕ ಶಾಂತಿ ಭಂಗವನ್ನುಂಟು ಮಾಡುವವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವವರು, ನಿಮ್ಮ ವ್ಯಾಪ್ತಿಯ ನಗರ ಅಥವಾ ಜಿಲ್ಲೆಗಳಿಗೆ ಭೇಟಿ ನೀಡುವ ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಮತ್ತು ಅವರು ತಂಗುವ ಸ್ಥಳ ಹಾಗೂ ಹೋಟೆಲ್ಗಳ ಮೇಲೆ ದೇಶದ ಭದ್ರತೆಯ ದೃಷ್ಟಿಯಿಂದ ನಿಗಾ ವಹಿಸಲು ಗುಪ್ತಚರ ಇಲಾಖೆ ಸೂಚನೆ ನೀಡಿದೆ.
ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ಏರ್ಪೋರ್ಟ್ಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು, ಅಣೆಕಟ್ಟುಗಳು, ಉಪಗ್ರಹ ಕೇಂದ್ರ, ಜಲವಿದ್ಯುತ್ ಸ್ಥಾವರಗಳು, ಥರ್ಮಲ್ ಸ್ಥಾವರಗಳು, ಸಾಫ್ಟ್ವೇರ್ ಕಂಪನಿಗಳು, ಪೈಪ್ಲೈನ್ ಕೇಂದ್ರಗಳು, ಕೈಗಾರಿಕೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಜನಸಂದಣಿ ಸೇರುವ ಶಾಪಿಂಗ್ ಮಾಲ್ಗಳು ಮತ್ತು ಹೋಟೆಲ್ಗಳು, ವಿದೇಶಿ ರಾಜತಾಂತ್ರಿಕ ಕಚೇರಿಗಳು, ವಸತಿ ಮತ್ತಿತರ ಕಟ್ಟಡಗಳು, ಜನ ಸಂದಣಿ ಸೇರುವ ದೇವಾಲಯಗಳು, ಮಸೀದಿ, ಚರ್ಚ್ಗಳು ಮತ್ತು ಜನಸಂದಣಿ ಸೇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮಂಗಳೂರು ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್ ಸಿಂದೂರ್’ ಪೋಸ್ಟ್ಗೆ ಧಿಕ್ಕಾರ
ದಾವಣಗೆರೆ: ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗೊ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯ ಭಾರತ, ಪಾಕಿಸ್ತಾನ ಮಧ್ಯೆ ಯುದ್ಧದ ಭೀತಿ ಸೃಷ್ಟಿಯಾಗಿದೆ. ಹೀಗಾಗಿ ಗಡಿ ಭಾಗಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ನಮ್ಮ ಜಿಲ್ಲೆಯಲ್ಲೂ ಕೂಡ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
“ಜನ ಆತಂಕಕ್ಕೆ ಒಳಗಾಗದ ರೀತಿ ಪೊಲೀಸರು ತಿಳಿವಳಿಕೆ ನೀಡಬೇಕು. ದಾವಣಗೆರೆ ಜಿಲ್ಲೆಯಾದ್ಯಂತ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಜಾಲತಾಣಗಳಲ್ಲಿ ಅನುಮಾನಾಸ್ಪದ ಸುದ್ದಿಗಳು, ಸುಳ್ಳು ಸುದ್ದಿಗಳು, ಪ್ರಚೋದನಾತ್ಮಕ ಪೋಸ್ಟ್, ದ್ವೇಷ ಭಾಷಣಗಳು ಕಂಡುಬಂದರೆ 9480803208 ವಾಟ್ಸಾಪ್ ನಂಬರ್ಗೆ ಮಾಹಿತಿ ನೀಡಬಹುದು” ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Fri, 9 May 25