ಬೆಂಗಳೂರು, ಫೆಬ್ರವರಿ 14: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸೇಫ್ ಸಿಟಿಯಾಗಿದ್ದ ಬೆಂಗಳೂರು (Bengaluru) ಕಾಂಗ್ರೆಸ್ (Congress) ಆಡಳಿತಕ್ಕೆ ಬಂದ ಬಳಿಕ ಕ್ರೈಮ್ ಸಿಟಿಯಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ (R Ashoka) ನಡೆಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದಕ್ಕೆ ಉದಾಹರಣೆ, ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಬಂದಿರುವ ಕೊಲೆ ಬೆದರಿಕೆ. ಎಲ್ಲಿ ಕಾನೂನು ಸುವ್ಯವಸ್ಥೆ ಸರಿ ಇರುತ್ತದೋ, ಅಲ್ಲಿಗೆ ಬಂಡವಾಳ ಹರಿದು ಬರುತ್ತದೆ. ನಮ್ಮ ರಾಜ್ಯದಲ್ಲಿ ಅನೇಕ ಹೂಡಿಕೆ ಬರುತ್ತಿತ್ತು, ಆದರೆ ಈಗ ಹೂಡಿಕೆದಾರರ ಸಂಖ್ಯೆ ಕಡಿಮೆಯಾಗಿದೆ ಎಂದರು.
ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕ ಈಗ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ನಂಬರ್ ಒನ್ ಕ್ರೈಮ್ ಸಿಟಿ ಆಗಿದೆ. ಸೈಬರ್ ವಂಚನೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. 438 ಕೋಟಿ ಸೈಬರ್ ವಂಚನೆ ಆಗಿದೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುಚ್ಚಿಕೊಂಡಿದ್ದ ಭಯೋತ್ಪಾದಕರು, ಬೀದಿ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಪಿಎಫ್‌ಐ ಸಂಘಟನೆಯವರು ಕೇಸ್ ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದು ಅಶೋಕ್ ಹೇಳಿದರು.
ಹಿಂದೆಲ್ಲ ಜನ್ಮದಿನ ಕಾರ್ಯಕ್ರಮಕ್ಕೆ ಕಟೌಟ್, ಫ್ಲೆಕ್ಸ್ ಹಾಕುತ್ತಿದ್ದರು. ಈಗ ಕೋಲಾರದಲ್ಲಿ ರಾಜಾರೋಷವಾಗಿ ತಲ್ವಾರ್ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಸುಧಾರಿತ ಬಾಂಬ್ ತಯಾರಿ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಮೊಹ್ಮದ್ ಸುಲೇಮಾನ್ ಎಂಬ ಕಿಂಗ್ ಪಿನ್ ಇದ್ದಾನೆ. ಅಮಾಯಕ ಯುವಕರನ್ನು ಟಾರ್ಗೆಟ್ ಮಾಡಿ ಅವರಿಂದ ಕೃತ್ಯ ಮಾಡಿಸುತ್ತಾನೆ. ಶಿವಾಜಿನಗರದಲ್ಲೂ ಒಬ್ಬನನ್ನು ಎನ್ಐಎ ಬಂಧಿಸಿದೆ. ಕರ್ನಾಟಕದಲ್ಲಿ ಇಂತಹವರು ಸ್ಲೀಪರ್ ಸೆಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಲೀಪರ್ ಸೆಲ್ಗಳಿಗೆ ಎಲ್ಲಿಂದ ಹಣ ಬರುತ್ತದೆ, ಯಾರು ಕೊಡ್ತಾರೆ ಎಂಬುದು ಅವರಿಗೆ ಗೊತ್ತಿರಲ್ಲ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಕೆಲಸ ಮಾಡುತ್ತಿದೆಯೋ, ಇಲ್ಲವೋ ಗೊತ್ತಿಲ್ಲ. ಅದು ಐಸಿಯುನಲ್ಲಿ ಇದೆಯೋ, ಚಿಕಿತ್ಸೆ ಕೊಡಲಾಗ್ತಿದೆಯೋ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು.
ಇದನ್ನೂ ಓದಿ: ಬೆಂಗಳೂರು: ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ, ದೂರು ದಾಖಲು
ಪೊಲೀಸ್ ಇಲಾಖೆಯವರು ಚಿಕ್ಕಮಗಳೂರಿನಲ್ಲಿ ಸ್ಟ್ರೈಕ್ ಮಾಡಿದರೆ ಆ ಮಾಹಿತಿಯೇ ಸರ್ಕಾರಕ್ಕೆ ಗೊತ್ತಿಲ್ಲ. ಸ್ಟ್ರೈಕ್ ಮಾಡಿದವರ ಮೇಲೆ ಸರ್ಕಾರ ಕ್ರಮವನ್ನು ತೆಗೆದುಕೊಂಡಿಲ್ಲ. ಬೆಳಗಾವಿಯಲ್ಲಿ ನಾವು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆವು. ಆದರೆ, ಬೆಳಗಾವಿಯಲ್ಲಿ ಚಳಿ ಜಾಸ್ತಿ ಇತ್ತೇನೋ, ನೀವು ನಮ್ಮ ಕಡೆ ತಿರುಗಿಯೂ ನೋಡಲಿಲ್ಲ ಎಂದು ಸರ್ಕಾರದ ವಿರುದ್ಧ ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Wed, 14 February 24