ಜೆರೋಸಾ ಶಾಲೆ ಪ್ರಕರಣ; ಮಂಗಳೂರಿನ ಭವಿಷ್ಯ ಬಲಿ ಕೊಡುವ ಕೆಲಸ ಸಂಘ ಪರಿವಾರ ಮಾಡುತ್ತಿದೆ ಎಂದ ಡಿವೈಎಫ್‌ಐ ಮುಖಂಡ
ಜೆರೋಸಾ ಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಈ ವೇಳೆ ಮಾತನಾಡಿದ ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ, ಮಂಗಳೂರಿನ ಭವಿಷ್ಯ ಬಲಿ ಕೊಡುವ ಕೆಲಸ ಸಂಘ ಪರಿವಾರ ನಡೆಸಿದೆ. ಅವಹೇಳನ ಮಾಡಿದ್ದಾರೆ ಅನ್ನೋದಕ್ಕೆ ಆಧಾರ ಸಿಗ್ತಾ ಇಲ್ಲ. ಶಿಕ್ಷಕಿ ಠಾಗೂರ್ ಅವರ ಪಠ್ಯವನ್ನು ಇಂಗ್ಲಿಷ್ ನಲ್ಲಿ ಪಾಠ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಮಂಗಳೂರು, ಫೆ.14: ನಗರದ ಜೆಪ್ಪುವಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆರೋಸಾ ಶಾಲೆಗೆ (Gerosa School) ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಶಾಲಾ ಆಡಳಿತ ಮಂಡಳಿಯ ಜೊತೆಗೆ ಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಹಿಂದೆ ಜಿಲ್ಲಾ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿತ್ತು.
ಶಿಕ್ಷಕಿ ಹಿಂದೂ ಧರ್ಮದ ಅವಹೇಳನ ಮಾಡಿಲ್ಲ ಅಂತ ಹೇಳಿದ್ದಾರೆ. ಘಟನೆ ಯೋಜಿತ ರೀತಿಯಲ್ಲಿ ನಡೆದಿದೆ, ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆದಿದೆ. ಮಂಗಳೂರಿನ ಭವಿಷ್ಯ ಬಲಿ ಕೊಡುವ ಕೆಲಸ ಸಂಘ ಪರಿವಾರ ನಡೆಸಿದೆ. ಅವಹೇಳನ ಮಾಡಿದ್ದಾರೆ ಅನ್ನೋದಕ್ಕೆ ಆಧಾರ ಸಿಗ್ತಾ ಇಲ್ಲ. ಶಿಕ್ಷಕಿ ಠಾಗೂರ್ ಅವರ ಪಠ್ಯವನ್ನು ಇಂಗ್ಲಿಷ್ ನಲ್ಲಿ ಪಾಠ ಮಾಡುತ್ತಿದ್ದರು. ಅವರು ಎಲ್ಲೂ ಕನ್ನಡ ಬಳಿಸಿಲ್ಲ, ಪಠ್ಯಕ್ಕೆ ಸಂಬಂಧಿಸಿದ ವಿಷಯ ಮಾತ್ರ ಮಾತನಾಡಿದ್ದಾರೆ. ಧಾರ್ಮಿಕ ವಿದ್ಯಮಾನ ಕುರಿತು ಮಾತನಾಡಿಲ್ಲ. ಇದು ಶಾಲೆಯ ಆಡಳಿತ ಮಂಡಳಿ ನೀಡಿದ ವಿವರಣೆ ಎಂದು ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ತಿಳಿಸಿದರು.
ಸಮಗ್ರ ತನಿಖೆಗೆ ನಾವು ಕೂಡ ಆಗ್ರಹಿಸುತ್ತಿದ್ದೇವೆ. ಪ್ರಕರಣ ಪೋಷಕರು ಬಗೆಹರಿಸಬೇಕಿತ್ತು, ಆದ್ರೆ ಸಂಘ ಪರಿವಾರದ ಕಾರ್ಯಕರ್ತರು ಮೊದಲು ಬಂದಿದ್ದರು. ಇದು ಹಲವು ಅನುಮಾನಕ್ಕೆ ಕಾರಣ ಆಗಿದೆ. ಲೋಕಸಭಾ ಚುನಾವಣೆಗೆ ಮತೀಯ ಲಾಭ ಪಡೆಯಲು ಸಂಘಟನೆ ಪ್ರಯತ್ನ ಪಟ್ಟಿದೆ. ಶಾಸಕ ವೇದವ್ಯಾಸ ಕಾಮತ್ ಭರತ್ ಶೆಟ್ಟಿ ಸಂಘ ಪರಿವಾರದ ಮುಖಂಡರಾಗಿ ಬಂದಿದ್ದರು. ಮಂಗಳೂರಿನ ಮಟ್ಟಿಗೆ ಇದು ಕಪ್ಪು ಚುಕ್ಕೆ ಎಂದು ಮುನೀರ್ ಕಾಟಿಪಳ್ಳ ಬೇಸರ ಹೊರ ಹಾಕಿದರು.
ಇದನ್ನೂ ಓದಿ: ಜೆರೋಸಾ ಶಾಲೆಗೆ ಕಾಂಗ್ರೆಸ್ ನಾಯಕರ ಭೇಟಿ; ಪ್ರಕರಣದಲ್ಲಿ ಶಿಕ್ಷಣ ಇಲಾಖೆಯಿಂದ ತಪ್ಪಾಗಿದೆ ಎಂದ ರಮಾನಾಥ ರೈ
ಮಂಗಳವಾರ ಜೆರೋಸಾ ಶಿಕ್ಷಣ ಸಂಸ್ಥೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತ್ತು. ಸರ್ಕಾರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ ರಮಾನಾಥ್ ರೈ ಮತ್ತು ವಿನಯಕುಮಾರ್ ಸೊರಕೆ ಆಗ್ರಹಿಸಿದ್ದರು. ಸತ್ಯಗಳು ಹೊರಬರಬೇಕು. ಈ ಘಟನೆ ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದೆ. ಕೋಮು ಸೌಹಾರ್ದತೆ ಕಾಪಾಡುವುದು ನಮ್ಮ ಉದ್ದೇಶ. ಕೆಲವರು ಘಟನೆಯಿಂದ ಲಾಭ ಪಡೆಯುತ್ತಿದ್ದಾರೆ. ಆದರೆ ನಮ್ಮ ಪಕ್ಷ ಹಾಗಲ್ಲ. ಸುಂದರ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದ್ದು, ಸರಿ ತಪ್ಪುಗಳ ಬಗ್ಗೆ ಚರ್ಚೆಯಾಗಬೇಕು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ, ತನಿಖೆಯಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆಂದು ಹೇಳಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:42 pm, Wed, 14 February 24