‘ಟಗರು’ಗೆ ಮೇಕೆ ಗಿಫ್ಟ್ ಕೊಟ್ಟು ಕೇಕೆ ಹಾಕಿದ ಅಭಿಮಾನಿಗಳು; ಮೇಕೆಯನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ಡಿಕೆಶಿ!
ಜಿಲ್ಲೆಯ ಮಸ್ಕಿ ಪಟ್ಟಣದ ಕಾಂಗ್ರೆಸ್ ಸಮಾವೇಶಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಸಖತ್ ಗಿಫ್ಟ್ ಕೊಟ್ಟಿದ್ದಾರೆ. ಹೌದು, ರಾಜ್ಯ ರಾಜಕಾರಣದ ಟಗರು ಎಂದೇ ಖ್ಯಾತಿ ಪಡೆದಿರುವ ಸಿದ್ದರಾಮಯ್ಯಗೆ ಅವರ ಅಭಿಮಾನಿಗಳು ಮೇಕೆ ಗಿಫ್ಟ್ ಕೊಟ್ಟರು.
ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ ಕಾಂಗ್ರೆಸ್ ಸಮಾವೇಶಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಸಖತ್ ಗಿಫ್ಟ್ ಕೊಟ್ಟಿದ್ದಾರೆ. ಹೌದು, ರಾಜ್ಯ ರಾಜಕಾರಣದ ಟಗರು ಎಂದೇ ಖ್ಯಾತಿ ಪಡೆದಿರುವ ಸಿದ್ದರಾಮಯ್ಯಗೆ ಅವರ ಅಭಿಮಾನಿಗಳು ಮೇಕೆ ಗಿಫ್ಟ್ ಕೊಟ್ಟರು. ಮೇಕೆ ಮರಿಯನ್ನು ಬಹಳ ಖುಷಿಯಿಂದ ಸ್ವೀಕರಿಸಿದ ಸಿದ್ದರಾಮಯ್ಯ ಅದನ್ನು ಎತ್ತಿಹಿಡಿದು ತಮ್ಮ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, ಪಕ್ಕದಲ್ಲಿ ನಿಂತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆ ಮರಿಗೆ ಕಾಂಗ್ರೆಸ್ ಶಾಲು ಹೊದ್ದಿಸಿ ಪಕ್ಷಕ್ಕೆ ಬರಮಾಡಿಕೊಂಡಾಗ ನೆರೆದಿದ್ದವರ ಹರ್ಷೋದ್ಗಾರ ಇಮ್ಮಡಿಯಾಯಿತು.
‘ಪ್ರತಾಪಗೌಡ 25ರಿಂದ 30 ಕೋಟಿಗೆ ಮಾರಾಟವಾಗಿದ್ದಾರೆ’ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದಾರೆ. ಪ್ರತಾಪಗೌಡ 25ರಿಂದ 30 ಕೋಟಿಗೆ ಮಾರಾಟವಾಗಿದ್ದಾರೆ. 2013, 18ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಿಜೆಪಿಗೆ ಓಡಿದರು. ಬಿಜೆಪಿಗೆ ಪ್ರತಾಪಗೌಡ ಪಾಟೀಲ್ ಸುಮ್ಮನೆ ಹೋಗಿಲ್ಲ. 25ರಿಂದ 30 ಕೋಟಿ ಪಡೆದು ಬಿಜೆಪಿಗೆ ಹೋಗಿದ್ದಾರೆ. ಪ್ರತಾಪಗೌಡ ಪಾಟೀಲ್ ಮಾರಾಟವಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು. BSY ಆಪರೇಷನ್ ಕಮಲದ ಮೂಲಕ ಸಿಎಂ ಆಗಿದ್ದಾರೆ. ಈ ಬಾರಿ ಪ್ರತಾಪಗೌಡ ಪಾಟೀಲ್ ಸೋಲುವುದು ಸತ್ಯ ಎಂದು ಸಿದ್ದರಾಮಯ್ಯ ಗುಟುರು ಹಾಕಿದರು.
‘7 ಕೆಜಿ ಅಕ್ಕಿ ಕೊಟ್ಟರೆ ನಿಮ್ಮಪ್ಪನ ಮನೆ ಗಂಟು ಹೋಗುತ್ತಾ?’ 7 ಕೆಜಿ ಅಕ್ಕಿ ಕೊಟ್ಟರೆ ನಿಮ್ಮಪ್ಪನ ಮನೆ ಗಂಟು ಹೋಗುತ್ತಾ? ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 2023ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ. 150 ಸ್ಥಾನ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ನಾವು ಅಧಿಕಾರಕ್ಕೆ ಬಂದ ಮೇಲೆ 10 ಕೆ.ಜಿ ಅಕ್ಕಿ ಕೊಡ್ತೇವೆ. ಅತಿ ಹೆಚ್ಚು ಸುಳ್ಳು ಹೇಳುವವರು ಯಾರಾದ್ರು ಇದ್ದಾರೆಂದರೆ ಅದು ಪ್ರಧಾನಿ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ. ಮೋದಿ, ಬಿಎಸ್‌ವೈ 1 ರೂಪಾಯಿ ಸಾಲಮನ್ನಾ ಮಾಡಿಲ್ಲ. ಯಾವುದೇ ಕಾರಣಕ್ಕೂ ಬಿಜೆಪಿಗೆ ವೋಟ್ ಹಾಕಬೇಡಿ. ಪ್ರತಾಪಗೌಡ ಪಾಟೀಲ್ ಪಕ್ಷ ದ್ರೋಹ ಮಾಡಿದಂತವರು. ಇಂತಹವರು ಕರ್ನಾಟಕ ರಾಜಕಾರಣದಲ್ಲಿ ಉಳೀಬಾರದು ಎಂದು ಸಿದ್ದರಾಮಯ್ಯ ಹೇಳಿದರು.
‘ಮೋದಿ ಅಧಿಕಾರಕ್ಕೆ ಬಂದರೆ ಅಚ್ಛೇ ದಿನ್ ಬರುತ್ತೆ ಅಂದಿದ್ರು’ ದೇಶದಲ್ಲಿ ಬಡವರು ಬದುಕಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಮೋದಿ ಅಧಿಕಾರಕ್ಕೆ ಬಂದರೆ ಅಚ್ಛೇ ದಿನ್ ಬರುತ್ತೆ ಅಂದಿದ್ರು. ಅಚ್ಛೇ ದಿನ್ ಬಂತಾ ಎಂದು ಸಿದ್ದರಾಮಯ್ಯ ಜನರಿಗೆ ಪ್ರಶ್ನೆ ಹಾಕಿದರು. ಮೋದಿ 15 ಲಕ್ಷ ಕೊಡೋದಿರಲಿ, 15 ರೂಪಾಯಿಯೂ ಕೊಟ್ಟಿಲ್ಲ. ಕಳೆದ 120 ದಿನಗಳಿಂದ ರೈತರು ಹೋರಾಟ ಮಾಡ್ತಿದ್ದಾರೆ. ಮೋದಿ ರೈತ ವಿರೋಧಿ ಕಾನೂನು ಜಾರಿ ಮಾಡಿದ್ದಾರೆ. ರಾಜ್ಯ, ರಾಜ್ಯದ ಜನ ಉಳಿಬೇಕಂದ್ರೆ ಬಿಜೆಪಿ ತೊಲಗಬೇಕು. ದುಡ್ಡು ಕೊಟ್ಟು ವೋಟ್ ಪಡೆಯುವ ಅಹಂನಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
‘ಯಡಿಯೂರಪ್ಪನ ಮಗ ವಿಜಯೇಂದ್ರ ಅಂದ್ರೆ ದುಡ್ಡು’ ಯಡಿಯೂರಪ್ಪನ ಮಗ ವಿಜಯೇಂದ್ರ ಅಂದ್ರೆ ದುಡ್ಡು ಎಂದು ಸಿಎಂ ಪುತ್ರ ವಿಜಯೇಂದ್ರನನ್ನು ಸಿದ್ದರಾಮಯ್ಯ ದುಡ್ಡಿಗೆ ಹೋಲಿಸಿದರು. ನಮ್ಮ ಅಭ್ಯರ್ಥಿ ಬಳಿ ದುಡ್ಡಿಲ್ಲ, ದುಡ್ಡಿಗೆ ಮತ ಮಾರಬೇಡಿ. ಬಸನಗೌಡ ಗೆದ್ರೆ ಅದು ಜನರ ಸ್ವಾಭಿಮಾನದ ಗೆಲುವು ಎಂದು ಮಸ್ಕಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡಿದರು.
ಇದನ್ನೂ ಓದಿ: CD ಲೇಡಿ ಇಂದು ಕೋರ್ಟ್ಗೆ ಹಾಜರಾಗೋದಿಲ್ವಾ? ಸಂತ್ರಸ್ತೆ ಌಬ್ಸೆಂಟ್ ಆಗಲು ಕಾರಣವೇನು?
Published On - 6:23 pm, Mon, 29 March 21