ನಮ್ ಏರಿಯಾಗೆ ಬೇರೆಯವರನ್ನ ಸೇರಿಸಬೇಡಿ -‘ಕೊರೊನಾ ಪಾದರಾಯನಪುರ’ ಟ್ಯಾಗ್ಲೈನ್ ತಪ್ಪಿಸಲು ಸ್ಥಳೀಯರ ಹರಸಾಹಸ
ನಗರದಲ್ಲಿ ಕೊರೊನಾ ಮಹಾಮಾರಿಗೆ ಸಿಲುಕಿ ಮೊದಲ ಹಾಟ್ಸ್ಪಾಟ್ ಆಗಿ ಹೊರಹೊಮ್ಮಿದ ಪಾದರಾಯನಪುರ ಇದೀಗ ವಿಶ್ವದಲ್ಲಿ ಹೊಸ ಕೊರೊನಾ ಪ್ರಭೇದಗಳು ಪತ್ತೆಯಾಗುತ್ತಿದ್ದಂತೆ ಎಚ್ಚರಿಕೆ ವಹಿಸಲು ಮುಂದಾಗಿದೆ.
ಬೆಂಗಳೂರು: ನಗರದಲ್ಲಿ ಕೊರೊನಾ ಮಹಾಮಾರಿಗೆ ಸಿಲುಕಿ ಮೊದಲ ಹಾಟ್ಸ್ಪಾಟ್ ಆಗಿ ಹೊರಹೊಮ್ಮಿದ ಪಾದರಾಯನಪುರ ಇದೀಗ ವಿಶ್ವದಲ್ಲಿ ಹೊಸ ಕೊರೊನಾ ಪ್ರಭೇದಗಳು ಪತ್ತೆಯಾಗುತ್ತಿದ್ದಂತೆ ಎಚ್ಚರಿಕೆ ವಹಿಸಲು ಮುಂದಾಗಿದೆ.
ಈ ನಡುವೆ, ನಮ್ ಏರಿಯಾಗೆ ಬೇರೆಯವರನ್ನ ಸೇರಿಸಬೇಡಿ ಎಂದು ಪಾದರಾಯನಪುರದ ನಿವಾಸಿಗಳಿಗೆ ಪರೋಕ್ಷವಾಗಿ ತಾಕೀತು ಮಾಡಲಾಗುತ್ತಿದೆ. ಜೊತೆಗೆ, ಬಡಾವಣೆಯಲ್ಲಿ ವಿದೇಶಿಗರ ಮೇಲೆ ಹದ್ದಿನಕಣ್ಣು ಇಡಲು ಸಹ ಸ್ಥಳೀಯರಿಗೆ ಹೇಳಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದ್ದ ಪಾದರಾಯನಪುರ ಸೋಂಕಿನ ಸುಳಿಯಲ್ಲಿ ಸಿಲುಕಿ ಕಂಟೇನ್ಮೆಂಟ್ ಜೋನ್ ಆಗಿತ್ತು. ಇದರಿಂದ, ಏರಿಯಾಗೆ ಕೊರೊನಾ ಪಾದರಾಯನಪುರ ಎಂಬ ಟ್ಯಾಗ್ಲೈನ್ ಸಹ ಅಂಟಿಕೊಂಡಿದೆ. ಹಾಗಾಗಿ, ಈ ಅಪಖ್ಯಾತಿಯಿಂದ ಪಾರಾಗಲು ಸ್ಥಳೀಯರು ಹರಸಾಹಸ ಪಡಬೇಕಾಗಿದೆ.
ಇದೀಗ, ಬ್ರಿಟನ್ನಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಭೇದ ಭಾರತಕ್ಕೆ ಕಾಲಿಡುವ ಭೀತಿ ಎದುರಾಗಿದೆ. ಹಾಗಾಗಿ, ಈ ಹೊಸ ಪ್ರಭೇದ ತಮ್ಮ ಬಡಾವಣೆಯಲ್ಲೂ ಹರಡುವ ಭೀತಿಯಲ್ಲಿರುವ ಪಾದರಾಯನಪುರದ ನಿವಾಸಿಗಳು ಮತ್ತೊಮ್ಮೆ ಸೋಂಕಿಗೆ ತುತ್ತಾಗದಂತೆ ಎಚ್ಚರ ವಹಿಸಲು ಹಾಗೂ ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಲು ಸನ್ನದ್ಧರಾಗಿದ್ದಾರೆ.
ವಿದೇಶದಿಂದ ಬಂದವರ ಬಗ್ಗೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸ್ಥಳೀಯರ ಜೊತೆಗೂಡಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಜನರಲ್ಲಿ ಮನವಿ ಮಾಡಿದರು. ಕೊರೊನಾ ಅಂದ್ರೆ ಪಾದರಾಯನಪುರ, ಪಾದರಾಯನಪುರ ಅಂದ್ರೆ ಕೊರೊನಾ ಎಂಬ ಅಪಖ್ಯಾತಿಗೆ ನಮ್ಮ ಏರಿಯಾ ತುತ್ತಾಗಿದೆ. ಹೀಗಾಗಿ, ನಮ್ಮ ಜನರಿಗೆ ಕೊರೊನಾ ಹೊಸ ಪ್ರಭೇದದ ಬಗ್ಗೆ ಹಾಗೂ ಈ ಬ್ರಿಟನ್ ವೈರಸ್ ಕುರಿತು ಅರಿವು ಮೂಡಿಸುತ್ತಿದ್ದೇವೆ. ಹೊರಗಡೆಯಿಂದ ಬಂದವರ ಮೇಲೆ ನಿಗಾ ಇಡಬೇಕು. ಈ ಸೋಂಕು ಮತ್ತೆ ಪಾದರಾಯನಪುರಕ್ಕೆ ಕಂಟಕವಾಗೋದು ಬೇಡ. ಜೊತೆಗೆ, ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡ್ತಿದ್ದೇವೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಹೇಳಿದರು.
ಹೊಸ ದಾಖಲೆ ಬರೆದ ಧಾರಾವಿ.. 24 ಗಂಟೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳಿಲ್ಲ