
ಬೆಂಗಳೂರು, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Terror Attack) ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರಿಂದ ಗುಂಡಿನ ದಾಳಿ ನಡೆದಿದ್ದು, ಕರ್ನಾಟಕದ (Karnataka) ಅನೇಕ ಪ್ರವಾಸಿಗರು ಸದ್ಯ ಅಲ್ಲಿ ಸಿಲುಕಿದ್ದಾರೆ. ಅವರನ್ನು ಕರೆತರಲು ಕರ್ನಾಟಕ ಸರ್ಕಾರ 2 ತಂಡಗಳನ್ನು ಕಳುಹಿಸಿದೆ. ಸಚಿವ ಅನಿಲ್ ಲಾಡ್ ಅವರ ನೇತೃತ್ವದಲ್ಲಿ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಇದೀಗ ಕರ್ನಾಟಕ ಸರ್ಕಾರ ಸಹಾಯವಾಣಿ (Karnataka Helpline) ಸಂಖ್ಯೆಗಳನ್ನು ಆರಂಭಿಸಿದೆ. ರಾಜ್ಯದ ಪ್ರವಾಸಿಗರ ಸಂಬಂಧಿಕರು, ಕುಟುಂಬಸ್ಥರು ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.
ಕನ್ನಡಿಗರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ತೆರಳಿದವರ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಮಾಹಿತಿ ನೀಡಲು ರಾಜ್ಯ ಸರ್ಕಾರ ಮನವಿ ಮಾಡಲಾಗಿದೆ.
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದ ವೇಳೆ ಜಮ್ಮು ಪ್ರವಾಸದಲ್ಲಿ ಇದ್ದ ಹಾವೇರಿ ಜಿಲ್ಲೆಯ ಎರಡು ಕುಟುಂಬಗಳು ಸುರಕ್ಷಿತವಾಗಿವೆ ಎಂಬುದು ತಿಳಿದುಬಂದಿದೆ. ಹಾವೇರಿಯ ವಿರೇಶ್ ದಂಪತಿ ಹಾಗೂ ಶಿಗ್ಗಾವಿಯ ನಾಗರಾಜ್ ದಂಪತಿ ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಸದ್ಯ ಇವರು ಸದ್ಯ ಜಮ್ಮುವಿನ ಕತ್ರಾದಲ್ಲಿದ್ದಾರೆ.
ಮತ್ತೊಂದೆಡೆ, ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರ ದಾಳಿ ಹಿನ್ನೆಲೆ ಸಾವಿರಾರು ಸಂಖ್ಯೆಯ ಪ್ರವಾಸಿಗರು ಕಾಶ್ಮೀರ ತೊರೆಯುತ್ತಿದ್ದಾರೆ. ಕಾಶ್ಮೀರದ ಹೋಟೆಲ್, ಲಾಡ್ಜ್‌ಗಳಿಂದ ಪ್ರವಾಸಿಗರು ನಿರ್ಗಮಿಸುತ್ತಿದ್ದು, ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ.
ಇದನ್ನೂ ಓದಿ: ಐಸ್ ಕ್ರೀಂ ತಿನ್ನಲೆಂದು ನಿಂತಿದ್ದರಿಂದ ಬಚಾವ್: ಪಹಲ್ಗಾಮ್ ಉಗ್ರ ದಾಳಿಯಿಂದ ಬೆಂಗಳೂರು ನಿವಾಸಿ ಪಾರಾಗಿದ್ದು ಹೀಗಂತೆ!
ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸಹ ಮೃತಪಟ್ಟಿದ್ದಾರೆ.
Published On - 10:29 am, Wed, 23 April 25