AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಲ್ಲಿ ಕನ್ನಡಿಗರ ರಕ್ಷಣೆಗೆ ಅಧಿಕಾರಿಗಳ ತಂಡ ದೌಡು: ಕೊಪ್ಪಳದ 20 ಮಂದಿ ಸುರಕ್ಷಿತ

ಉಗ್ರರ ದಾಳಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ 2 ತಂಡಗಳು ಕಾಶ್ಮೀರಕ್ಕೆ ದೌಡಾಯಿಸಿವೆ. ಅಧಿಕಾರಿಗಳಷ್ಟೇ ಅಲ್ಲ, ಇಡೀ ಕಾರ್ಯಾಚರಣೆಯ ಹೊಣೆಯನ್ನು ಸಚಿವ ಸಂತೋಷ್ ಲಾಡ್​ಗೆ ವಹಿಸಲಾಗಿದೆ.

ಕಾಶ್ಮೀರದಲ್ಲಿ ಕನ್ನಡಿಗರ ರಕ್ಷಣೆಗೆ ಅಧಿಕಾರಿಗಳ ತಂಡ ದೌಡು: ಕೊಪ್ಪಳದ 20 ಮಂದಿ ಸುರಕ್ಷಿತ
ಕಾಶ್ಮೀರದಲ್ಲಿ ಕನ್ನಡಿಗರ ರಕ್ಷಣೆಗೆ ಅಧಿಕಾರಿಗಳ ತಂಡ ದೌಡು
Follow us
Ganapathi Sharma
|

Updated on:Apr 23, 2025 | 7:55 AM

ಬೆಂಗಳೂರು, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ. ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಉಗ್ರರ ದಾಳಿ ಬಗ್ಗೆ ತಿಳಿಯುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ  (Siddaramaiah) ಮಂಗಳವಾರ ರಾತ್ರಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು. ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದರು. ಇದರ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಚೇತನ್ ನೇತೃತ್ವದ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ಕಳಿಸಿಕೊಡಲಾಗಿದೆ. ದೆಹಲಿ ಕರ್ನಾಟಕ ಭವನದ ಆಯುಕ್ತರನ್ನೂ ಅರ್ಲಟ್ ಮಾಡಲಾಗಿದೆ. ಜೊತೆಗೆ ಇಡೀ ಕಾರ್ಯಾಚರಣೆಯ ಜವಾಬ್ದಾರಿಯನ್ನು ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್​ಗೆ ವಹಿಸಿದ್ದಾರೆ.

ಸಿಎಂ ಸೂಚನೆ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿಯಿಂದ ದೆಹಲಿಗೆ ತೆರಳಿ ಅಲ್ಲಿಂದ ಕಾಶ್ಮೀರಕ್ಕೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ. ಕಾಶ್ಮೀರದ ಸ್ಥಳೀಯ ಆಡಳಿತ, ಭದ್ರತಾ ಪಡೆಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿ ಇರಲಿದ್ದು, ಕನ್ನಡಿಗರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಸುರಕ್ಷಿತ ಸ್ಥಳಾಂತರ ಮತ್ತು ಇತರ ಸಹಾಯವನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ವಿಪರ್ಯಾಸ ಅಂದ್ರೆ ಲಾಡ್​ಗೆ ವಿಶೇಷ ವಿಮಾನ ಸಿಕ್ಕರೂ ಪೈಲಟ್ ಇಲ್ಲದೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯರಾತ್ರಿವರೆಗೂ ಪರದಾಡುವಂತಾಯಿತು.

ಇದನ್ನೂ ಓದಿ
Image
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
Image
ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೊಬ್ಬ ಕನ್ನಡಿಗ ಬಲಿ
Image
ದುಷ್ಟರ ಉದ್ದೇಶವೆಂದೂ ಯಶಸ್ವಿಯಾಗದು; ಪಹಲ್ಗಾಮ್ ದಾಳಿಗೆ ಮೋದಿ ಖಂಡನೆ
Image
ಪಹಲ್ಗಾಮ್‌ ಉಗ್ರರ ದಾಳಿ, ಕನ್ನಡಿಗರ ನೆರವಿಗೆ ಅಧಿಕಾರಿಗಳನ್ನ ಕಳುಹಿಸಿದ ಸಿಎಂ

ಉಗ್ರರ ದಾಳಿ ಖಂಡಿಸಿದ ಸಿಎಂ ಸಿದ್ದರಾಮಯ್ಯ

ಉಗ್ರರ ದಾಳಿಯನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಸರ್ಕಾರ ಕನ್ನಡಿಗರ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಂಡ ಬೆನ್ನಲ್ಲೇ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಶಿವಮೊಗ್ಗ ಉದ್ಯಮಿ ಬಲಿ

ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ. ಉಗ್ರ ಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಕಾಶ್ಮೀರದಲ್ಲಿ ಕೊಪ್ಪಳದ 20 ಮಂದಿ ಸುರಕ್ಷಿತ

ಕಾಶ್ಮೀರದಲ್ಲಿ ಕೊಪ್ಪಳದ 20 ಮಂದಿ ಸಿಲುಕಿರುವ ಮಾಹಿತಿ ಸಿಕ್ಕಿದೆ. ಸೋಮವಾರ ಕೊಪ್ಪಳದಿಂದ ನಾಲ್ಕು ಕುಟುಂಬಗಳ 20 ಸದಸ್ಯರು ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಇವರೆಲ್ಲ ಉಗ್ರರ ದಾಳಿ ನಡೆದ ಸ್ಥಳದಿಂದ 80 ಕಿಲೋ ಮೀಟರ್ ದೂರದಲ್ಲಿದ್ದು, ಎಲ್ಲರೂ ಸೇಫ್ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:27 am, Wed, 23 April 25