Pahalgam Terror Attack: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ, ಮತ್ತೊಬ್ಬ ಕನ್ನಡಿಗ ಬಲಿ
ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಟೆರರ್ ಅಟ್ಯಾಕ್ ನಡೆದಿದೆ. ಈ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಕನ್ನಡಿಗ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದ ಮಂಜುನಾಥ್ ಸಾವಿನ ಬೆನ್ನಲ್ಲೇ ಬೆಂಗಳೂರಿನ ನಿವಾಸಿಯೊಬ್ಬರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

ಶ್ರೀನಗರ, (ಏಪ್ರಿಲ್ 22): ಜಮ್ಮುಕಾಶ್ಮೀರದ (jammu And kashmir) ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯಲ್ಲಿ (Tourists Attack) ಮತ್ತೋರ್ವ ಕನ್ನಡಿಗ ಬಲಿಯಾಗಿದ್ದಾನೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸಾವಿನ ಬೆನ್ನಲ್ಲೇ ಇದೀಗ ಬೆಂಗಳೂರಿನ ಭರತ್ ಭೂಷಣ್ ಎನ್ನುವರು ಸಹ ಉಗ್ರರ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಪಹಲ್ಗಾಮ್‌ನಲ್ಲಿ ಟಿಆರ್ಎಫ್(The Resistance Front Terror) ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಂತಾಗಿದೆ. ಈಗಾಗಲೇ ಕರ್ನಾಟಕದಿಂದ ಅಧಿಕಾರಿಗಳು ಹಾಗೂ ಪೊಲೀಸರು ಸಹ ಕಾಶ್ಮೀರದತ್ತ ಹೊರಟ್ಟಿದ್ದಾರೆ.
ಉಗ್ರರ ಗುಂಡಿಗೆ ಬಲಿಯಾಗಿರುವ ಬೆಂಗಳೂರು ನಿವಾಸಿ ಭರತ್ ಭೂಷಣ್, ಪ್ರಕಾಶ್ ಕೋಳಿವಾಡ ತಂಗಿಯ ಗಂಡನ ಸ್ನೇಹಿತ ಎಂದು ತಿಳಿದುಬಂದಿದೆ. ಹೀಗಾಗಿ ಕೋಳಿವಾಡ ಕುಟುಂಬ ಸಹ ಭರತ್ ಭೂಷಣ್ ಮೃತ ದೇಹ ತರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದೆ.
ಇದನ್ನೂ ಓದಿ: Pahalgam Terror Attack: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಶಿವಮೊಗ್ಗ ಉದ್ಯಮಿ ಬಲಿ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯ ಮೇಲಿನ ಹುಲ್ಲುಗಾವಲುಗಳಲ್ಲಿ ಇಂದು ಗುಂಡಿನ ದಾಳಿ ನಡೆದಿದೆ. ಈ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಲು ಸಾಧ್ಯ. ಉಗ್ರರು ಬಚ್ಚಿಟ್ಟುಕೊಂಡು ಗುಂಡು ಹಾರಿಸಿದ್ದಾರೆ. ಕಾಡುಗಳು, ಸ್ಫಟಿಕದಂತಹ ಸ್ಪಷ್ಟ ಸರೋವರಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾದ ಪಹಲ್ಗಾಮ್ ಜನಪ್ರಿಯ ಪ್ರವಾಸಿ ತಾಣವಾಗಿದೆ. ಹೀಗಾಗಿ ಇದನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಇದನ್ನೇ ಅರಿತ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಾರು 30 ಜನರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇನ್ನು ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ದಾಳಿ ಬೆನ್ನಲ್ಲೇ ಮೊದಲಿಗೆ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸಾವು ಸುದ್ದಿ ಬರುತ್ತಿದ್ದಂತೆಯೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಸಭೆ ನಡೆಸಿದ್ದು, ಪಹಲ್ಗಾಮ್ ಇನ್ನೆಷ್ಟು ಕನ್ನಡಿಗರು ಸಿಲುಕಿದ್ದಾರೆ ಎನ್ನುವ ಮಾಹಿತಿ ಪಡೆದು ಅವರ ರಕ್ಷಣೆಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೆಲ ಅಧಿಕಾರಿಗಳನ್ನು ಸ್ಥಳಕ್ಕೆ ಹೇಳಿದ್ದು, ಅದರಂತೆ ಅಧಿಕಾರಿಗಳು ಸಹ ಪಹಲ್ಗಾಮ್ ನತ್ತ ಹೊರಟ್ಟಿದ್ದಾರೆ
ಇನ್ನು ಬೆಂಗಳೂರಿನಿಂದ ಕೆಲ ಪೊಲೀಸ್ ಅಧಿಕಾರಿಗಳು ಸಹ ತೆರಳುತ್ತಿದ್ದಾರೆ. ಬೆಂಗಳೂರಿನಿಂದ ದೆಹಲಿ ತೆರಳಿ ಅಲ್ಲಿಂದ ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Tue, 22 April 25