ಉಡುಪಿ, ಮಾರ್ಚ್ 17: ಅಯೋಧ್ಯೆಯಲ್ಲಿ ರಾಮ ದೇವರಿಗೆ (Ram Mandir) ಪ್ರಾಣ ಪ್ರತಿಷ್ಠೆ ಮಾಡಿದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಕೃಷ್ಣನೂರು ಉಡುಪಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ರಾಮಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ನಿರ್ಣಾಯಕ ಪಾತ್ರ ವಹಿಸಿದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಇದೀಗ ಮಥುರಾ ಕೃಷ್ಣನ ವಿಮುಕ್ತಿಯ ಕನಸು ಕಾಣಲಾಗುತ್ತಿದೆ. ಮಥುರಾ ವಿಮುಕ್ತಿಯ ಬೇಡಿಕೆಗೆ ಅಭಿನಂದನಾ ಸಮಾರಂಭ ವೇದಿಕೆಯಾಯಿತು. ಮಂಡಲ ಪೂಜೆ ಮುಗಿಸಿ ಬಂದ ಪೇಜಾವರ ಶ್ರೀಗಳನ್ನು ನೂರಾರು ನಾಗರಿಕರು ವೈಭವದಿಂದ ಬರಮಾಡಿಕೊಂಡರು.
ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ನಿಂತು ಪ್ರತಿಮೆಗೆ ಪ್ರಾಣ ಪ್ರತಿಷ್ಠೆ ಮಾಡಿದ ಪೇಜಾವರ ಶ್ರೀಗಳನ್ನು ಕಂಡು ಕನ್ನಡಿಗರು ರೋಮಾಂಚನಗೊಂಡಿದ್ದರು. ಸಾಂಸ್ಕೃತಿಕ ಪುನರುತ್ಥಾನದ ಕಾಲಘಟ್ಟದಲ್ಲಿ ಶ್ರೀಗಳ ಈ ಮಹತ್ವದ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಮುಂದಿನ 48 ದಿನಗಳ ಕಾಲ ಅಲ್ಲೇ ಇದ್ದು, ರಾಮದೇವರ ಪೂಜೆ ಸಹಿತ ಮಂಡಲ ಪೂಜೆ ಮುಗಿಸಿ ಬಂದಿರುವ ವಿಶ್ವ ಪ್ರಸನ್ನತೀರ್ಥರನ್ನು, ತವರು ನೆಲದಲ್ಲಿ ಇಂದು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಇದನ್ನೂ ಓದಿ: ಅಯೋಧ್ಯೆ ರಾಮನ ದರ್ಶನ ಮಾಡಿ ಇಹದ ಯಾತ್ರೆ ಮುಗಿಸಿದ ಪಾಂಡುರಂಗ ಶಾನುಭಾಗ್
ಮಂಗಳೂರು ವಿಮಾನ ನಿಲ್ದಾಣದಿಂದ ನೂರಾರು ರಾಮಭಕ್ತರು ಬೈಕ್ ರ್‍ಯಾಲಿ ಮೂಲಕ ಅವರನ್ನು ಸ್ವಾಗತಿಸಿದರು. ಜಿಲ್ಲೆಯ ಗಡಿಭಾಗ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಗಳನ್ನು ಗೌರವಿಸಲಾಯಿತು. ಬಳಿಕ ಉಡುಪಿಯ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಉಡುಪಿಗೆ ಬಂದ ಶ್ರೀಗಳು ಕೃಷ್ಣದೇವರನ್ನು ಕಂಡು, ತಮ್ಮ ರಾಮ ಸೇವೆಯನ್ನು ಕೃಷ್ಣಾರ್ಪಣ ಗೊಳಿಸಿದರು.
ರಥ ಬೀದಿಯ ಚಂದ್ರೇಶ್ವರ, ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಇದು ತನ್ನ ಗುರುಗಳಾದ ಶ್ರೀ ವಿಶ್ವೇಶ ತೀರ್ಥರು ಹಾಗೂ ನಾಡಿನ ಸಂತರು ಕೊಟ್ಟ ಸೌಭಾಗ್ಯ! ಉಡುಪಿಯ ಆಂಜನೇಯನ ಸ್ಪೂರ್ತಿಯಿಂದ ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಯಾಗಿದೆ. ಮಥುರಾ ಕ್ಷೇತ್ರದ ವಿಮುಕ್ತಿಯ ಕನಸು ಕೂಡ ಅದೆಷ್ಟು ಬೇಗ ನನಸಾಗಲಿ ಎಂದು ಆಶಿಸಿದರು.
ಸದ್ಯ ಪರ್ಯಾಯ ಪೀಠಸ್ಥರಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಪೇಜಾವರ ಶ್ರೀಗಳನ್ನು ಸನ್ಮಾನಿಸಿದರು. ಅಯೋಧ್ಯೆಯಿಂದ ತಂದಿರುವ ಆಂಜನೇಯ ದೇವರ ಪ್ರೇರಣೆಯಿಂದಲೇ ಉಡುಪಿಯಲ್ಲಿ ಅನೇಕ ಪವಾಡಗಳು ನಡೆಯುತ್ತಿದೆ. ತಾಲಾ ಖೋಲೋ ಅಭಿಯಾನ ಹಾಗೂ ರಾಮಮಂದಿರ ನಿರ್ಮಾಣದ ಕನಸು ಕಟ್ಟಿದ್ದು ಉಡುಪಿಯಲ್ಲೇ. ಆಂಜನೇಯ ದೇವರು ಕನ್ನಡಿಗರಾಗಿದ್ದು, ರಾಮಮಂದಿರದ ಕನಸು ನನಸಾಗುವಲ್ಲಿ ಹನುಮಂತನ ಪ್ರೇರಣೆ ಮಹತ್ವದ್ದಾಗಿದೆ. ಹಾಗಾಗಿ ರಾಮ ಸೇವೆ ಮಾಡಿ ಬಂದ ಪೇಜಾವರ ಶ್ರೀಗಳನ್ನು ಅಭಿನವ ಆಂಜನೇಯ ಬಿರುದು ಕೊಟ್ಟು ಸನ್ಮಾನಿಸುತ್ತಿರುವುದಾಗಿ ಹೇಳಿದರು. ಹೈಕೋರ್ಟ್ ತೀರ್ಪು ಬಂದ ನಂತರ ಜೈಲಿನಲ್ಲಿ ಬಂದಿಯಾಗಿದ್ದ ರಾಮ ಲಲ್ಲಾನನ್ನು ತಾನೇ ಬೀಗ ಒಡೆದು ಹೊರತಂದು ಪೂಜೆಗೆ ಅನುವು ಮಾಡಿಕೊಟ್ಟ ದಿನವನ್ನು ಸ್ಮರಿಸಿದರು.
ಉಡುಪಿಯ ಮಠಗಳು ಸೇರಿದಂತೆ ನೂರಾರು ಅಭಿಮಾನಿಗಳು ಸಂಘಟನೆಗಳು ಪೇಜಾವರ ಶ್ರೀಗಳನ್ನು ಇದೇ ವೇಳೆ ಗೌರವಿಸಿದರು. ತನ್ನ ಸೇವಾ ಕಾರ್ಯಗಳನ್ನು ಕೃಷ್ಣನಿಗೆ ಅರ್ಪಿಸಿರುವ ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ನಡೆಯಬೇಕಾಗಿರುವ ರಾಮ ನವಮಿಯ ರೂಪರೇಷೆಗಳನ್ನು ನಿರ್ಧರಿಸಲು ಮತ್ತೊಮ್ಮೆ ಅಯೋಧ್ಯೆಗೆ ವಾಪಸ್ ಆಗಿದ್ದಾರೆ. ಈ ಮೂಲಕ ತಮ್ಮ ರಾಮ ಸೇವೆ ಮುಂದುವರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.