ದೆಹಲಿ, ಅಕ್ಟೋಬರ್ 16: ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರ ಪಟ್ಟಣಗಳಿಗೆ ನೀರು ಪೂರೈಸುವ ಮಾರ್ಕಂಡೇಯ ಅಣೆಕಟ್ಟು ನಿರ್ಮಾಣ ವಿಚಾರವಾಗಿ ಸದ್ಯ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಕರ್ನಾಟಕ ಮತ್ತು ತಮಿಳುನಾಡು (Tamil Nadu) ನಡುವೆ ಮಧ್ಯಸ್ಥಿಕೆಗೆ 12 ವಾರಗಳ ಸಮಯ ಕೇಳಿದೆ. ಆದರೆ ಕೇಂದ್ರ ಸರ್ಕಾರದ ಈ ಮನವಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಅಫಿಡವಿಟ್ ಪರಿಶೀಲನೆ ನಡೆಸಿ, ರಾಜ್ಯಗಳ ಅಭಿಪ್ರಾಯ ಪಡೆದು ಆದೇಶಿಸುವ ಭರವಸೆ ನೀಡಿದ್ದು, ಸದ್ಯ 4 ವಾರಗಳ ಕಾಲ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.
ಕರ್ನಾಟಕವು ಪೆನ್ನಾರ್ ನದಿಯ ಉಪನದಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕೋಲಾರ ಜಿಲ್ಲೆಯ ಯರಗೋಳದಲ್ಲಿ ಅಣೆ ಕಟ್ಟನ್ನು ನಿರ್ಮಿಸುತ್ತಿದೆ, ಇದಕ್ಕೆ 240 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಆದರೆ ಈ ಅಣೆಕಟ್ಟು ನಿರ್ಮಾಣ ಕುರಿತು ತಮಿಳುನಾಡು ತದಾಗೆ ತೆಗೆದಿತ್ತು. ಅಣೆಕಟ್ಟು ನಿರ್ಮಾಣಗೊಂಡರೆ ನದಿಯ ನೈಸರ್ಗಿಕ ಹರಿವಿಗೆ ತೊಂದರೆಯಾಗಲಿದ್ದು, ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಮೇಲೆ ಪ್ರಭಾವ ಬೀರಲಿದೆ ಎಂದು ವಾದಿಸಲಾಗಿತ್ತು.
ಪೆನ್ನಾರ್ ನದಿ ನೀರಿನ ವಿಚಾರದಲ್ಲಿ ಕರ್ನಾಟಕದೊಂದಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಅಂತಾರಾಜ್ಯ ಜಲ ವಿವಾದ ನ್ಯಾಯಾಧೀಕರಣ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸರ್ಕಾರ ಈ ಹಿಂದೆಯೇ ಮನವಿ ಮಾಡಿತ್ತು. ಕಳೆದ ವಿಚಾರಣೆ ವೇಳೆ, ಕೇಂದ್ರವು ನಾಲ್ಕು ವಾರಗಳಲ್ಲಿ ನ್ಯಾಯಾಧೀಕರಣವನ್ನು ಸ್ಥಾಪಿಸುವುದಾಗಿ ಹೇಳಿತ್ತು. ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ಗೆ ತಿಳಿಸಲಾಗಿತ್ತು.
ಮಾರ್ಕಂಡೇಯ ನದಿಯು ಪೆನ್ನಾರ್ನ ಉಪನದಿಯಾದ ಕಾರಣ ಅಣೆಕಟ್ಟು ನಿರ್ಮಿಸಿದರೆ ನದಿ ನೀರಿನ ಹರಿವಿಗೆ ತೊಂದರೆಯಾಗುತ್ತದೆ ತಮಿಳುನಾಡಿನ ಜನರು ಕೃಷಿ ಹಾಗೂ ಕುಡಿಯಲು ಪೆನ್ನಾರ್ ನದಿ ನೀರನ್ನು ಅವಲಂಬಿಸಿದ್ದಾರೆ. ಹಾಗಾಗಿ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡಬಾರದು ಎಂದು ತಮಿಳುನಾಡು ತಕರಾರು ತೆಗೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.