Markandeya Dam: ವರ್ಷದಲ್ಲಿ ಎರಡನೇ ಬಾರಿಗೆ ತುಂಬಿದ ಮಿನಿ ಕೆ.ಆರ್.ಎಸ್ ಡ್ಯಾಂ, ಪ್ರವಾಸಿಗರಿಗೆ ಹಬ್ಬ
ಅಣೆಕಟ್ಟು ತುಂಬಿ ಹರಿಯುತ್ತಿದ್ದು ಬಯಲು ಸೀಮೆ ಕೋಲಾರದಲ್ಲಿ ಇಂಥಹ ಸುಂದರ ವಾತಾವರಣವನ್ನು ಸವಿಯಲು ವೀಕೆಂಡ್ನಲ್ಲಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಸುಂದರ ಬೆಟ್ಟಗುಡ್ಡಗಳ ನಡುವೆ ಸುಂದರವಾದ ಪರಿಸರದಲ್ಲಿ ಡ್ಯಾಂ ಸುತ್ತಮುತ್ತ ಪ್ರವಾಸಿಗರು ಪುಲ್ ಎಂಜಾಯ್ ಮಾಡುತ್ತಿದ್ದಾರೆ.
ಕೋಲಾರ: ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ, ಬಯಲು ಸೀಮೆ ಕೋಲಾರದಲ್ಲಿರುವ ಏಕೈಕ ಡ್ಯಾಂ ಮೈಸೂರಿನಲ್ಲಿರುವ ಕೆ.ಆರ್.ಎಸ್(KRS Dam) ರೀತಿಯಲ್ಲಿ ಇದು ಬಯಲು ಸೀಮೆಗೆ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿ, ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿದ್ದ ಡ್ಯಾಂನಲ್ಲಿ ನೀರು ತುಂಬಿದ್ದೇ ತಡ ಅದು ತನ್ನ ಸೌಂದರ್ಯದಿಂದಲೇ ಸಾವಿರಾರು ಜನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ವರ್ಷದಲ್ಲಿ ಎರಡನೇ ಬಾರಿ ತುಂಬಿ ಹರಿಯುತ್ತಿದೆ ಕೋಲಾರದ ಮಿನಿ ಕೆ.ಆರ್.ಎಸ್ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಮಾರ್ಕಂಡೇಯ ಅಣೆಕಟ್ಟು ಅಂದರೆ ಅದನ್ನು ಕೋಲಾರದ ಮಿನಿ ಕೆಆರ್ಎಸ್ ಎಂದು ಕರೆಯಲಾಗುತ್ತದೆ. ಮಾರ್ಕಂಡೇಯ ಅಣೆಕಟ್ಟು ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ಈ ಬೃಹತ್ ಅಣೆಕಟ್ಟು ನೋಡಲು ಮೈಸೂರಿನ ಕೃಷ್ಣರಾಜಸಾಗರ ಅಣೆಕಟ್ಟಿನಂತೆ ಬಾಸವಾಗುತ್ತದೆ. ಆ ಕಾಲದಲ್ಲಿ ಈ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ನಿರ್ಮಾಣ ಮಾಡಲಾಗಿತ್ತು. ಕಳೆದ ಹದಿಮೂರು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಸರಿಯಾದ ಮಳೆ ಇಲ್ಲದೆ ಅಣೆಕಟ್ಟು ಒಣಗಿಹೋಗಿತ್ತು ಆದ್ರೆ ಕಳೆದೊಂದು ವರ್ಷದಲ್ಲಿ ಉತ್ತಮ ಮಳೆಯಾದ ಪರಿಣಾಮ ಒಂದೇ ವರ್ಷದಲ್ಲಿ ಇದು ಎರಡನೇ ಬಾರಿಗೆ ಅಣೆಕಟ್ಟು ತುಂಬಿ ಕೋಡಿ ಹರಿಯುವ ಮೂಲಕ ಜಿಲ್ಲೆಯ ಜನರನ್ನು ತನ್ನತ್ತ ಆಕರ್ಶಿಸುತ್ತಿದೆ.
ಸುಂದರ ವಾತಾವರಣದಲ್ಲಿ ಕಳೆದು ಹೋಗುತ್ತಿದ್ದಾರೆ ಪ್ರವಾಸಿಗರು ಅಣೆಕಟ್ಟು ತುಂಬಿ ಹರಿಯುತ್ತಿದ್ದು ಬಯಲು ಸೀಮೆ ಕೋಲಾರದಲ್ಲಿ ಇಂಥಹ ಸುಂದರ ವಾತಾವರಣವನ್ನು ಸವಿಯಲು ವೀಕೆಂಡ್ನಲ್ಲಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಸುಂದರ ಬೆಟ್ಟಗುಡ್ಡಗಳ ನಡುವೆ ಸುಂದರವಾದ ಪರಿಸರದಲ್ಲಿ ಡ್ಯಾಂ ಸುತ್ತಮುತ್ತ ಪ್ರವಾಸಿಗರು ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಒಂದೆಡೆ ಯುವಕರು ನೀರಿನಲ್ಲಿ ಡೈ ಹೊಡೆಯುತ್ತಾ ಈಜಾಡುತ್ತಾ ಎಂಜಾಯ್ ಮಾಡುತ್ತಿದ್ರೆ ಇನ್ನೊಂದೆಡೆ ಮಹಿಳೆಯರು ಮಕ್ಕಳು ಕುಟುಂಬ ಸಮೇತವಾಗಿ ಕೋಡಿ ಹರಿಯುತ್ತಿದ್ದ ಸ್ಥಳದಲ್ಲಿ ಜುಳು ಜುಳು ಜರಿಯಂತ ಹರಿಯುವ ನೀರಿನಲ್ಲಿ ಮೈಯೊಡ್ಡಿ ಖುಷಿ ಪಡುತ್ತಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಜನರಿಗೆ ಆಕರ್ಷಣೆಯ ಕೇಂದ್ರ ಇನ್ನು ರಾಜಧಾನಿ ಬೆಂಗಳೂರಿಗೆ ಕೇವಲ 80 ಕಿ.ಮೀ ದೂರದಲ್ಲಿರುವ ಮಾರ್ಕಂಡೇಯ ಡ್ಯಾಂ ನೋಡಲು ಕೇವಲ ಕೋಲಾರ ಜಿಲ್ಲೆಯಿಂದಷ್ಟೇ ಅಲ್ಲ ರಾಜಧಾನಿ ಬೆಂಗಳೂರಿನಿಂದಲೂ ಒಂಡೇ ಟ್ರಿಪ್ ಅಂತ ಜನ ಇಲ್ಲಿಗೆ ಬರ್ತಾರೆ. ಒಂಡೇ ಡೇಟಿಂಗ್ ಅಂತ ಲವರ್ಸ್ ಬಂದ್ರೆ, ಸದಾ ಬೆಂಗಳೂರಿನ ಬಿಸಿ ಲೈಫ್ನಲ್ಲಿ ಸ್ವಲ್ಪ ರಿಲೀಫ್ಗಾಗಿ ಇನ್ನು ಕೆಲವು ಜನ ಪ್ಯಾಮಿಲಿ ಜೊತೆಗೆ ಒಂದಷ್ಟು ಊಟ, ತಿಂಡಿ ಪಾರ್ಸೆಲ್ ಕಟ್ಟಿಕೊಂಡು ಬಂದು ಒಂದು ದಿನದ ಟ್ರಿಪ್ ಬಂದು ಈ ಸುಂದರ ವಾತಾವರಣದಲ್ಲಿ ಪುಲ್ ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಇನ್ನು ಪಕ್ಕದ ಆಂದ್ರ ಹಾಗೂ ತಮಿಳು ನಾಡಿಗೂ ಬೂದಿಕೋಟೆ ಹತ್ತಿರವಿರುವ ಕಾರಣ ಅಲ್ಲಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇದನ್ನೂ ಓದಿ: ಯೋಗದಿನದಂದು ಪಾಕಿಸ್ತಾನ ಸರ್ಕಾರ ಮಾಡಿದ ಟ್ವೀಟ್ಗೆ ಪಾಕ್ ಪ್ರಜೆಗಳಿಂದ ಟೀಕೆ
ಡ್ಯಾಂ ಸುತ್ತಮುತ್ತಲ ರೈತರಿಗೆ ಸಂತಸ ಗರಿಗೆದರಿದ ಕೃಷಿ ಚಟುವಟಿಕೆ ಡ್ಯಾಂ ತುಂಬಿದರೆ ಈ ಭಾಗದ ರೈತರು ಕೃಷಿ ಚಟುವಟಿಕೆಗಳು ಕೂಡಾ ಗರಿಗೆದರುತ್ತದೆ ಹಾಗೂ ಡ್ಯಾಂ ನಲ್ಲಿ ನೀರಿದ್ದರೆ ಭತ್ತ ಬೆಳೆಯಲು ರೈತರು ಮನಸ್ಸು ಮಾಡುತ್ತಾರೆ. ಇನ್ನು ಇಲ್ಲೇ ಮೀನುಮರಿ ಉತ್ಪಾದನಾ ಕೇಂದ್ರ ಇರುವ ಕಾರಣ ಮೀನುಗಾರಿಕೆಗೂ ಅನುಕೂಲ ಅನ್ನೋದು ಸ್ಥಳೀಯ ರೈತರ ಅನಿಸಿಕೆ.
ಮಿನಿ ಕೆಆರ್ಎಸ್ ಸುತ್ತಲೂ ಮೂಲಭೂತ ಸೌಲಭ್ಯಗಳದ್ದೇ ಕೊರತೆ ಈ ಪ್ರದೇಶಕ್ಕೆ ಡ್ಯಾಂನಲ್ಲಿ ನೀರಿದ್ದರೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿಗೆ ಬರುವ ಜನರಿಗೆ ಒಳ್ಳೆಯ ರಸ್ತೆ, ಒಂದಷ್ಟು ಕಾಲ ಕಳೆಯಲು ನೆರಳು, ಮಕ್ಕಳು ಆಟವಾಡಲು ಸಣ್ಣದೊಂದು ಪಾರ್ಕ್, ಜೊತೆಗೆ ಪುಂಡಪೋಕರಿಗಳಿಂದ ರಕ್ಷಣೆ ಹೀಗೆ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ದುಪ್ಪಟ್ಟಾಗುತ್ತದೆ. ಜೊತೆಗೆ ಸ್ಥಳೀಯ ಆಡಳಿತಕ್ಕೂ ಕೂಡಾ ಆದಾಯದ ಮೂಲವಾಗುತ್ತದೆ ಅನ್ನೋದು ಪ್ರವಾಸಿಗರಾದ ಆರತಿ ಮತ್ತು ನಾಗಭೂಷಣ್ ಅವರ ಮಾತು.
ಒಟ್ಟಾರೆ ನದಿ ನಾಲೆಗಳಿಲ್ಲದ ಕೋಲಾರದಲ್ಲಿ ಇರೋದೊಂದೆ ಡ್ಯಾಂ ಅದರಲ್ಲೂ ನೀರಿಲ್ಲದೆ ಸೊರಗಿ ಹೋಗಿತ್ತು, ಆದ್ರೆ ಜಿಲ್ಲೆಯಲ್ಲಿ ಭರ್ಜರಿ ಮಳೆಯಿಂದ ಜಿಲ್ಲೆಯ ಜನರ ಜೊತೆಗೆ ಹೊರಗಿನ ಜನಕ್ಕೂ ಈ ಮಾರ್ಕಂಡೇಯ ಡ್ಯಾಂ ಒಳ್ಳೆ ಹಾಟ್ ಸ್ಪಾಟ್ ಪರಿಣಮಿಸಿದ್ದು ಬರುವ ಜನರು ನೀರನಲ್ಲಿ ಕುಣಿದು ಕುಪ್ಪಳಿಸಿ ಸಕತ್ ಎಂಜಾಯ್ ಮಾಡುತ್ತಿರೋದಂತು ಸುಳ್ಳಲ್ಲ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಕೋಲಾರದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:26 pm, Wed, 22 June 22