ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಹೈರಾಣಾಗಿದ್ದಾರೆ. ನಾಯಿಗಳು ಮಕ್ಕಳು ಮತ್ತು ವೃದ್ಧರ ಮೇಲೆ ಎರಗಿ ದಾಳಿ ನಡೆಸುವ ಪ್ರಕರಣ ಹೆಚ್ಚಾಗಿವೆ. ಹೀಗಾಗಿ ಜನರು ತೀವ್ರ ಆತಂಕಕ್ಕೆ ಒಳಗಾಗುವಂತಾಗಿದ್ದು, ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
ವಸಂತ್ ಎಂಬ ಬಾಲಕನ ಮೇಲೆ ನಾಯಿ ದಾಳಿ ನಡೆಸಿದ್ದು, ಆತ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸನಾಯಕರ ಹಟ್ಟಿ ಗ್ರಾಮದ ವಸಂತ್ ಅದೃಷ್ಟವಶಾತ್ ಕಣ್ಣು ಹಾನಿಯಿಂದ ಪಾರಾಗಿದ್ದಾನೆ. ನಾಯಿ ಕೇವಲ ವಸಂತ್ ಮೇಲೆ ಮಾತ್ರ ದಾಳಿ ನಡೆಸಿಲ್ಲ. ಈತನ ಜೊತೆಗೆ ಗ್ರಾಮದ ನಾಲ್ವರು ಮಕ್ಕಳು ಸೇರಿದಂತೆ ಆರಕ್ಕೂ ಹೆಚ್ಚು ಜನರ ಮೇಲೆ ಅದೇ ನಾಯಿ ದಾಳಿ ನಡೆಸಿ ಗಾಯಗೊಳಿಸಿದೆ.
ವೃದ್ಧರು ಮತ್ತು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ನಾಯಿ ದಾಳಿ ನಡೆಸುತ್ತಿದೆ. ಹೀಗಾಗಿ ದಾಳಿ ನಡೆಸಿದ ನಾಯಿಯನ್ನು ಹುಚ್ಚು ನಾಯಿ ಎಂದು ಗುರುತಿಸಿರುವ ಜನರು ಆತಂಕಕ್ಕೆ ಈಡಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಾಯಿ ಹಾವಳಿಯಿಂದ ರೊಚ್ಚಿಗೆದ್ದ ಜನರು ಈಗಾಗಲೇ ಹುಚ್ಚು ನಾಯಿಯನ್ನು ಹೊಡೆದು ಸಾಯಿಸಿದ್ದಾರಂತೆ. ಆದರೆ ಹುಚ್ಚು ನಾಯಿ ಗ್ರಾಮದ ಕೆಲ ಬೀದಿ ನಾಯಿಗಳ ಜೊತೆಗೆ ಓಡಾಡಿಕೊಂಡಿತ್ತು. ಅಂತೆಯೇ ಬೀದಿ ನಾಯಿಗಳ ಹಾವಳಿಯೂ ಗ್ರಾಮದಲ್ಲಿ ಹೆಚ್ಚಾಗಿದೆ. ಹೀಗಾಗಿ ಗ್ರಾಮ ಪಂಚಾಯತಿಯಿಂದ ಬೀದಿ ನಾಯಿಗಳನ್ನ ಹಿಡಿದು ಸಾಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮ ಪಂಚಾಯತಿ ಸದಸ್ಯ ಮಹಾಂತೇಶ್ ತಿಳಿಸಿದ್ದಾರೆ.
ಚಿತ್ರದುರ್ಗದ ಹೊಸ ನಾಯಕರಹಟ್ಟಿಗೆ ಬಂದಿದ್ದ ಹೊಸ ನಾಯಿಯೊಂದು ಕಂಡವರ ಮೇಲೆ ದಾಳಿ ನಡೆಸಿ ಅವಾಂತರ ಸೃಷ್ಟಿಸಿದೆ. ಅಂತೆಯೇ ಬೀದಿ ನಾಯಿಗಳ ದೋಸ್ತಿ ಮಾಡಿದ ಹುಚ್ಚು ನಾಯಿಯನ್ನು ಕಂಡಿದ್ದ ಜನರು ನಾಯಿಗಳನ್ನು ನೋಡಿದರೆ ಬೆಚ್ಚು ಬೀಳುತ್ತಿದ್ದಾರೆ. ಹೀಗಾಗಿ ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ
ಬೀದಿ ನಾಯಿಗಳ ಹಾವಳಿಗೆ ತತ್ತರಿಸಿದ ಮೊಳಕಾಲ್ಮೂರು ಜನ!
ಚಿತ್ರದುರ್ಗ ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಮಕ್ಕಳ ವಾರ್ಡ್‌ನ ಬೆಡ್ ಮೇಲೆ ಮಲಗಿರುವ ನಾಯಿ! ಫೋಟೋ ವೈರಲ್