ಬೀದಿ ನಾಯಿಗಳ ಹಾವಳಿಗೆ ತತ್ತರಿಸಿದ ಮೊಳಕಾಲ್ಮೂರು ಜನ!
ಮೊಳಕಾಲ್ಮೂರು ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು ಪಟ್ಟಣದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಗಮನಹರಿಸಬೇಕಿದೆ.
ಚಿತ್ರದುರ್ಗ: ಪುಟ್ಟ ಮಕ್ಕಳು ಕೈಯಲ್ಲಿ ಬಿಸ್ಕತ್ತು, ಬ್ರೆಡ್ ಹಿಡಿದು ಹೋಗುವಂತಿಲ್ಲ. ಮಹಿಳೆಯರು, ವೃದ್ಧರ ಕೈಯಲ್ಲಿ ಕೈಚೀಲವಿದ್ದರೆ ಎಚ್ಚರವಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಬೀದಿ ನಾಯಿಗಳು ಅಟ್ಯಾಕ್ ಮಾಡುವುದು ಗ್ಯಾರಂಟಿ ಎಂಬಂತಾಗಿದೆ.. ಮೊಳಕಾಲ್ಮೂರು ಪಟ್ಟಣದಲ್ಲಿ ನಾಯಿಗಳ ಹಾವಳಿ.ಇದರಿಂದ ಪಟ್ಟಣದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕು ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಪಟ್ಟಣ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಉಪವಿಭಾಗ ಕಚೇರಿ, ಬಸ್ ನಿಲ್ದಾಣ ಸೇರಿ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಬೀದಿ ನಾಯಿಗಳು ಹಿಂಡುಹಿಂಡಾಗಿ ಓಡಾಡುತ್ತಿವೆ.
ಶುರುವಾಯ್ತು ಬೀದಿನಾಯಿಗಳ ಕಾಟ:
ಈಗಾಗಲೇ ಪಟ್ಟಣದ ಅನೇಕ ಕಡೆ ನಾಯಿಗಳ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರ ಮೇಲೆ ನಾಯಿಗಳು ದಾಳಿ ನಡೆಸಿದ ಘಟನೆಗಳು ನಡೆದಿವೆ. ಈ ಸಂಬಂಧ ಸಾರ್ವಜನಿಕರು ಅನೇಕ ಸಲ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ.
ರಸ್ತೆಗಳ ಮೇಲೆ ಓಡಾಡುವ ಆಗಮಿಸುವ ನಾಯಿಗಳು ವಾಹನ ಸಂಚಾರಕ್ಕೂ ಅಡಚಣೆ ಮಾಡುತ್ತಿವೆ. ನಾಯಿಗಳಿಗೆ ಡಿಕ್ಕಿ ಹೊಡೆದು ವಾಹನ ಸವಾರರು ಬಿದ್ದಿರುವ ಘಟನೆಗಳೂ ನಡೆದಿವೆ. ಅಧಿಕಾರಿಗಳು ಮಾತ್ರ ನಾಯಿಗಳ ನಿಯಂತ್ರಣ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಜನರು ಅಲವತ್ತುಕೊಂಡಿದ್ದಾರೆ.
ನಾಯಿಗಳ ಹಾವಳಿ ತಡೆಯಬೇಕಿರುವ ಪಟ್ಟಣ ಪಂಚಾಯತಿ ಆವರಣದಲ್ಲೇ ಬೀದಿ ನಾಯಿಗಳ ಹಿಂಡು ಕಾಣ ಸಿಗುತ್ತದೆ. ಅಧಿಕಾರಿಗಳ ನಿರ್ಲಕ್ಷ ಧೋರಣೆ ಕಂಡು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ. ಇನ್ನಾದರೂ ಪಟ್ಟಣದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಸುಪ್ರೀಂಕೋರ್ಟ್ ಆದೇಶದನ್ವಯ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ರ್ಯಾಬೀಸ್ ಇಂಜೆಕ್ಷನ್ ಕೊಡಬೇಕು. ನಾಯಿಗಳನ್ನು ದೂರದ ಪ್ರದೇಶಕ್ಕೆ ಬಿಡುವ ಬದಲು ಸಂತತಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಮೊಳಕಾಲ್ಮೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪಿ.ಬಸಣ್ಣ ಹೇಳಿದ್ದಾರೆ.
ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಕ್ಕೂ, ನಾಯಿಗಳಿಗೂ ಇದೆಯಾ ಅಮಾವಾಸ್ಯೆ ಸಂಬಂಧ..