
ಬೆಂಗಳೂರು, (ಡಿಸೆಂಬರ್ 01): ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೀವತಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಆದ್ರೆ, ಇದೀಗ ಈ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಹೈಕೋರ್ಟ್ಗೆ (Karnataka High Court) ಅರ್ಜಿ ಸಲ್ಲಿಸಿದ್ದು, ಇಂದು (ಡಿಸೆಂಬರ್ 01) ನ್ಯಾಯಮೂರ್ತಿಗಳಾದ ಕೆ.ಎಸ್ ಮುದಗಲ್ ಮತ್ತು ಟಿ ವೆಂಕಟೇಶ್ ನಾಯಕ್ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಪ್ರಬಲ ವಾದ ಮಂಡಿಸಿದ್ದು, ಸಂತ್ರಸ್ತೆಯ ಮೌನ, ಸಾಕ್ಷ್ಯಗಳ ಮೇಲಿನ ಸಂಶಯಗಳನ್ನು ಮುಂದಿಟ್ಟು ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವಂತೆ ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಪ್ರಬಲ ವಾದ ಮಂಡಿಸಿದ್ದು, ಪ್ರಜ್ವಲ್ 2024 ಏಪ್ರಿಲ್ 24ರಂದು ದೇಶ ತೊರೆಯುವಾಗ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆ್ಯಪಲ್ ಮೊಬೈಲ್ ವಶಕ್ಕೆ ನೀಡಿಲ್ಲವೆಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಆ್ಯಪಲ್ ಮೊಬೈಲ್ ನೀಡುವಂತೆ ಸೆ.91ರ ಅಡಿ ನೋಟಿಸ್ ನೀಡಿಲ್ಲ. ಐಎಂಇಐ ನಂಬರ್ ಆಧರಿಸಿ ಮೊಬೈಲ್ ಕಂಪನಿಯಿಂದ ಮಾಹಿತಿ ಪಡೆಯಲು ಯತ್ನಿಸಿಲ್ಲ. ಸಂತ್ರಸ್ತೆ ದೂರು ದಾಖಲಿಸದೇ 3 ವರ್ಷ ಮೌನವಾಗಿ ಇದ್ದಿದ್ದೇಕೆ? ಒಮ್ಮೆಗೇ ನಾಲ್ಕು ಪ್ರತ್ಯೇಕ ಕ್ರಿಮಿನಲ್ ಕೇಸ್ಗಳು ಹೇಗೆ ದಾಖಲಾದವು? ಎಂದು ಪ್ರಶ್ನಿಸಿದರು.
ಇನ್ನು ಇದೇ ವೇಳೆ ಎಫ್‌ಎಸ್‌ಎಲ್ ಸಾಕ್ಷಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ವಕೀಲ ಸಿದ್ಧಾರ್ಥ್ ಲೂಥ್ರಾ , ರಾಜಕೀಯ ದುರುದ್ದೇಶದಿಂದ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ಇಲ್ಲಿನ ಸರ್ಕಾರ ಬಳಸಿ ಕೇಸ್ ದಾಖಲಿಸಿದೆ. 2019, 2021ರಲ್ಲಿ ಅತ್ಯಾಚಾರಕ್ಕೆ ಒಳಗಾದರೂ 2023ರಲ್ಲಿ ಸಂತ್ರಸ್ತೆ ಬಂದಿದ್ದೇಕೆ? ಫಾರ್ಮ್ಹೌಸ್ಗೆ ಬಂದರೂ ಆಕೆಯ ಬಟ್ಟೆಗಳನ್ನು ಹಿಂಪಡೆಯಲಿಲ್ಲವೇಕೆ? ಪೊಲೀಸರು ಬಟ್ಟೆಯನ್ನು ವಶಕ್ಕೆ ಪಡೆದಿರುವುದೇ ಸಂಶಯಾಸ್ಪದವಾಗಿದೆ. ಡಿಎನ್‌ಎ ಪರೀಕ್ಷೆ ಮಾಡಿದ ವ್ಯಕ್ತಿಯೇ ಮೃತಪಟ್ಟಿದ್ದಾರೆ. ಹೀಗಾಗಿ FSL ಸಾಕ್ಷಿ ಒಪ್ಪತಕ್ಕದ್ದಲ್ಲವೆಂದು ಪ್ರಬಲ ವಾದ ಮಂಡಿಸಿದರು.
ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ ಪ್ರಜ್ವಲ್ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ನಾಡಿದ್ದು ಅಂದರೆ ಬುಧವಾರಕ್ಕೆ ಮುಂದೂಡಿದ್ದು, ಅಂದು ಹೇಗೆಲ್ಲಾ ವಾದ ಪ್ರತಿವಾದ ನಡೆಯುತ್ತೆ? ಇದಕ್ಕೆ ಕೋರ್ಟ್ ಏನು ಹೇಳುತ್ತೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
Published On - 4:58 pm, Mon, 1 December 25